ಬೆಂಗಳೂರು, ಸೆ. 19, 2020 (ಕರಾವಳಿ ಟೈಮ್ಸ್) : ಜೆಡಿಎಸ್ ಪಕ್ಷದ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ರಮೇಶ್ ಬಾಬು ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಕೆ. ಹರಿಪ್ರಸಾದ್ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ರಮೆಶ್ ಬಾಬು ಅವರು ಆಗ್ನೇಯ ಪದವೀಧರರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಜಾತ್ಯಾತೀತ ಜನತಾ ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಷ್ಟ್ರೀಯ ವಕ್ತಾರರು ಆಗಿದ್ದ ರಮೇಶ್, ಪಕ್ಷದ ಪರಮೋಚ್ಚ ನಾಯಕ ಎಚ್.ಡಿ. ದೇವೇಗೌಡ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು ಎಂಬುದಿಲ್ಲಿ ಪ್ರಸ್ತುತ.
ರಮೇಶ್ ಬಾಬು ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, 60 ಹಿರಿಯ ನಾಯಕರು ಪಕ್ಷಕ್ಕೆ ಸೇರಲು ಈಗಾಗಲೇ ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಒಂದು ಸಮಿತಿ ರಚಸಿದ್ದು, ಸಮಿತಿ ಮುಂದೆ 60 ಅರ್ಜಿ ಬಂದಿದೆ. ಎಲ್ಲವೂ ಪರಿಶೀಲನೆ ಮಾಡಿ ಬಳಿಕ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ರಮೇಶ್ ಬಾಬು ಕೂಡ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಅರ್ಜಿ ಹಾಕಿದ್ದರು. ಸದ್ಯ ವಿಧಾನಪರಿಷತ್ ಚುನಾವಣೆ ಬರೋದ್ರಿಂದ ರಮೇಶ್ ಬಾಬು ಕಾಂಗ್ರೆಸ್ ಸೇರ್ಪಡೆಗೆ ನಾವು ಒಪ್ಪಿಕೊಂಡೆವು. ಹೀಗಾಗಿ ಇಂದು ಅಧಿಕೃತವಾಗಿ ರಮೇಶ್ ಬಾಬು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದರು.
0 comments:
Post a Comment