ಬಂಟ್ವಾಳ, ಸೆ. 21, 2020 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ವ್ಯಾಪಕ ಹಾನಿ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ತಾಲೂಕಿನ ಬಿ ಮೂಡ ಗ್ರಾಮದ ಪಲ್ಲಮಜಲು ಎಂಬಲ್ಲಿ ಎರಡು ಮನೆಗಳ ನಡುವಿನ ಬರೆ ಜರಿದು ಬಿದ್ದಿದೆ. ಇಲ್ಲಿಗೆ ತುರ್ತಾಗಿ ತಡೆಗೋಡೆ ನಿರ್ಮಾಣ ಆಗದೆ ಇದ್ದಲ್ಲಿ ಇಲ್ಲಿನ ನಿವಾಸಿ ಪ್ರದೀಪ್ ಬಿನ್ ದೇಜಪ್ಪ ಎಂಬವರ ಮನೆ ಕುಸಿತಗೊಳ್ಳುವ ಭೀತಿ ಎದುರಾಗಿದೆ. ಕಾವಳಪಡೂರು ಗ್ರಾಮದ ಮದ್ವ ನಿವಾಸಿ ಗಿರಿಜಾ ಕೋಂ ಬಾಬು ಎಂಬವರ ಮನೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಸಾಲೆತ್ತೂರು ಗ್ರಾಮದ ರಾಮಣ್ಣ ಶೆಟ್ಟಿ ಎಂಬುವರ ವಾಸ್ತವ್ಯದ ಪಕ್ಕಾ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ಇದನ್ನು ಸದ್ಯ ಟಾರ್ಪಲ್ ಹಾಸಿ ದುರಸ್ತಿ ಪಡಿಸಲಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಬನಾರಿ ಬಾಬಟ್ಟ ಎಂಬಲ್ಲಿ ಅಬ್ದುಲ್ ಯಾನೆ ಅಬ್ದುಲ್ ರಜಾಕ್ ಎಂಬುವರ ಮನೆಗೆ ಗುಡ್ಡದ ಬರೆ ಜರಿದು ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಕುಸಿದು ಬಿದ್ದಿರುತ್ತದೆ. ಮನೆಯಲ್ಲಿ ಮಕ್ಕಳು ಸೇರಿ 6 ಜನರಿದ್ದು, ಈ ಪೈಕಿ ಗಂಭೀರ ಗಾಯಗೊಂಡ ಇಬ್ಬರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಪಸ್ವಲ್ಪ ಗಾಯಗಳಾದ ಉಳಿದ ನಾಲ್ವರನ್ನು ವಿಟ್ಲ ಸಮುದಾಯ ಕೇಂದ್ರಕ್ಕೆ ದಾಖಲಿಸಲಾಗಿದೆ.
ಸದ್ರಿ ಮನೆ ಪಕ್ಕದಲ್ಲಿ ವೆಂಕಪ್ಪ ಸಪಲ್ಯ ಅವರ ಮನೆ ಇದ್ದು ಸದ್ರಿಯವರನ್ನು ಮನೆ ಖಾಲಿ ಮಾಡಿಸಿ ಗುಜರಿ ಹಮೀದ್ ಅವರ ಮನೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.
ಸಜಿಪಮುನ್ನೂರು ಗ್ರಾಮದ ಆಲಾಡಿ ನಿವಾಸಿ ಆಮಿನಾ ಕೋಂ ಅಶ್ರಫ್ ಅವರ ಮನೆಯ ಒಂದು ಪಾಶ್ರ್ವದ ಗೋಡೆ ಕುಸಿದು ಬಿದ್ದಿದೆ. ಮನೆಯ ಹಂಚಿನ ಛಾವಣಿಗೆ ಹಾನಿಯಾಗಿರುತ್ತದೆ. ಮುಂಜಾಗ್ರತಾ ಕ್ರಮವಾಗಿ ಮನೆ ಮಂದಿಯನ್ನು ಮತ್ತೊಂದು ಮನೆಗೆ ವರ್ಗಾಯಿಸಲಾಗಿದೆ.
ಕರೋಪಾಡಿ ಗ್ರಾಮದ ಪದ್ಯಾಣ ಎಂಬಲ್ಲಿ ಪಿ ಜಿ ಕೇಶವ ಭಟ್ ಅವರ ವಾಸ್ತವ್ಯದ ಪಕ್ಕಾ ಮನೆ ಹಾಗೂ ಹಟ್ಟಿಗೆ ಬೃಹತ್ ಮರ ಬಿದ್ದು, ಹಟ್ಟಿ ಸಂಪೂರ್ಣ ಹಾನಿಯಾಗಿದ್ದು, ಮನೆಗೆ ಭಾಗಶಃ ಹಾನಿಯಾಗಿದೆ. ಜಾನುವಾರುಗಳಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ. ಇಡ್ಕಿದು ಗ್ರಾಮದ ಕಲಸರ್ಪೆ ನಿವಾಸಿ ಚೆನ್ನು ಕೋಂ ಕೊರಗಪ್ಪ ಮೂಲ್ಯ ಅವರ ವಾಸದ ಕಚ್ಚಾ ಮನೆಗೆ ಭಾಗಶಃ ಹಾನಿಯಾಗಿದೆ. ದೇವಸ್ಯಪಡೂರು ಗ್ರಾಮದ ಹೊಸಮನೆ ನಿವಾಸಿ ತಾರಾನಾಥ ಬಿನ್ ಸೋಮಪ್ಪ ಪೂಜಾರಿ ಅವರ ವಾಸ್ತವ್ಯದ ಮನೆಗೆ ಭಾಗಶಃ ಹಾನಿಯಾಗಿದೆ.
ಅನಂತಾಡಿ ಗ್ರಾಮದ ಇದೆಮುಂಡೇವು ನಿವಾಸಿ ಪುಷ್ಪಾವತಿ ಕೋಂ ಗಂಗಾಧರ ಅವರ ಕೊಟ್ಟಿಗೆ ಹಾನಿ ಸಂಭವಿಸಿದೆ. ಕೆದಿಲ ಗ್ರಾಮದ ಗಿರಿಯಪ್ಪ ಗೌಡ ಅವರ ಮನೆಗೆ ತಾಗಿಕೊಂಡಿರುವ ಕೊಟ್ಟಿಗೆ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಛೇರಿ ಮಳೆ ಹಾನಿ ವಿಭಾಗದ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ ಎಂದು ಬಂಟ್ವಾಳ ತಾಲೂಕು ಕಛೇರಿ ಮಳೆ ಹಾನಿ ವಿಭಾಗದ ವಿಷಯ ನಿರ್ವಾಹಕ ವಿಶು ಕುಮಾರ್ ತಿಳಿಸಿದ್ದಾರೆ.
0 comments:
Post a Comment