ಡುಪ್ಲೆಸಿಸ್ ಸ್ಫೋಟಕ ಆಟದ ಹೊರತಾಗಿಯೂ 16 ರನ್‍ಗಳಿಂದ ರಾಜಸ್ಥಾನ್ ರಾಯಲ್ಸ್‍ಗೆ ಶರಣಾದ ಸಿಎಸ್‍ಕೆ
ಶಾರ್ಜಾ, ಸೆ. 23, 2020 (ಕರಾವಳಿ ಟೈಮ್ಸ್) : ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಪರಾಕ್ರಮ ಮೆರೆದಿದ್ದು, ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 16 ರನ್‍ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಸಂಜು ಸ್ಯಾಮ್ಸನ್ (74 ರನ್, 32 ಎಸೆತ) ಮತ್ತು ಸ್ಟೀವ್ ಸ್ಮಿತ್ ಅವರ ಉತ್ತಮ ಬ್ಯಾಟಿಂಗ್ ಹಾಗೂ ಕೊನೆಯಲ್ಲಿ ಜೋಫ್ರಾ ಆರ್ಚರ್ ಅವರ ಸ್ಫೋಟಕ ಹೊಡೆತಗಳ ನೆರವಿನಿಂದ ಬರೋಬ್ಬರಿ 217 ರನ್‍ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡಿತ್ತು. ಆದರೆ ಬೃಹತ್ ಮೊತ್ತ ಬೆನ್ನಟ್ಟಿದ ಚೆನ್ನೈ ತಂಡ ನಿಗದಿತ 20 ಓವರ್‍ಗಳಲ್ಲಿ 199 ರನ್ ಗಳಿಸಲು ಮಾತ್ರ ಶಕ್ತವಾಗಿ 16 ರನ್‍ಗಳಿಂದ ರಾಜಸ್ಥಾನ್ ರಾಯಲ್ಸ್‍ಗೆ ಶರಣಾಯಿತು.
ಸ್ಫೋಟಕ ಬ್ಯಾಟಿಂಗ್ ನಡೆಸಿ ಚೆನ್ನೈ ಬೌಲರ್‍ಗಳನ್ನು ಬೆಂಡೆತ್ತಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‍ಮನ್ ಸಂಜು ಸ್ಯಾಮ್ಸನ್, ಬಳಿಕ ವಿಕೆಟ್ ಹಿಂದೆಯೂ ಅದ್ಭುತ ಕೈಚಳ ತೋರಿದ್ದು, ಎರಡು ಸ್ಟಂಪ್ ಮತ್ತು ಎರಡು ಕ್ಯಾಚ್ ಪಡೆಯುವ ಮೂಲಕ ಸಿಎಸ್‍ಕೆ ತಂಡವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಫಾಫ್ ಡು ಪ್ಲೆಸಿಸ್ ಮತ್ತು ಕೇದಾರ್ ಜಾಧವ್ ಅವರನ್ನು ಕ್ಯಾಚ್ ಹಿಡಿದು ಔಟ್ ಮಾಡಿದರೆ, ಸ್ಯಾಮ್ ಕರ್ರನ್ ಮತ್ತು ರುತುರಾಜ್ ಗಾಯಕವಾಡ್ ಅವರನ್ನು ಸ್ಟಂಪ್ ಮಾಡಿ ಸ್ಯಾಮ್ಸನ್ ಪೆವಿಲಿಯನ್‍ಗೆ ಅಟ್ಟಿದರು.
ಚೆನ್ನೈ ತಂಡಕ್ಕೆ ಉತ್ತಮ ಆರಂಭ ನೀಡಿದ ಮುರಳಿ ವಿಜಯ್ ಮತ್ತು ಶೇನ್ ವ್ಯಾಟ್ಸನ್, ಪವರ್ ಪ್ಲೇ ಮುಕ್ತಾಯದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 53 ರನ್ ಸೇರಿಸಿದ್ದರು. ಆದರೆ ಆರನೇ ಓವರಿನಲ್ಲಿ ಲೆಗ್ ಸೈಡ್ ಕಡೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶೇನ್ ವ್ಯಾಟ್ಸನ್ (33 ರನ್, 21 ಎಸೆತ) ರಾಹುಲ್ ತೇವಟಿಯಾ ಅವರಿಗೆ ಕ್ಲೀನ್ ಬೌಲ್ಡ್ ಆದರು. ನಂತರ ಶ್ರೇಯಾಸ್ ಗೋಪಾಲ್ ಅವರ ಓವರಿನಲ್ಲಿ 21 ರನ್ ಗಳಿಸಿ ಆಡುತ್ತಿದ್ದ ಮುರುಳಿ ವಿಜಯ್ ಕೂಡ ಓಟ್ ಆದರು. ನಂತರ ಬಂದ ಸ್ಯಾಮ್ ಕರ್ರನ್ ಅವರು ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಅಬ್ಬರಿಸುವ ಮುನ್ಸೂಚನೆ ನೀಡಿದರಾದರೂ ಫ್ರಂಟ್ ಫೂಟ್ ಆಟಕ್ಕೆ ಮಾರುಹೋಗುವ ಪ್ರಯತ್ನದಲ್ಲಿ ತೇವಟಿಯಾ ಬೌಲಿಂಗ್‍ನಲ್ಲಿ ಸ್ಯಾಮ್ಸನ್ ಅವರ ಮಿಂಚಿನ ಸ್ಟಂಪಿಂಗಿಗೆ ಬಲಿಯಾದರು. ಬಳಿಕ ಬಂದ ರುತುರಾಜ್ ಗಾಯಕವಾಡ್ ಅವರು ಶೂನ್ಯ ಸಂಪಾದನೆ ಮಾಡಿ ಪೆವಿಲಿಯನ್ ಸೇರಿಕೊಂಡರು.
ಬಳಿಕ ಕ್ರೀಸ್‍ಗೆ ಬಂದ ಫಾಫ್ ಡು ಪ್ಲೆಸಿಸ್ ಹಾಗೂ ಕೇದಾರ್ ಜಾಧವ್ ಜೋಡಿ ತಂಡಕ್ಕೆ ಒಂದಷ್ಟು ಚೇತರಿಕೆ ನೀಡಿದರು. ಆದರೆ 16 ಎಸೆತಗಳಲ್ಲಿ 22 ರನ್ ಭಾರಿಸಿ ಆಡುತ್ತಿದ್ದ ಕೇದಾರ್ ಜಾಧವ್ ಅವರು ಟಾಮ್ ಕುರ್ರನ್ ಅವರ ಬೌಲಿಂಗ್‍ನಲ್ಲಿ ಸಂಜು ಸ್ಯಾಮ್ಸನ್ ಅವರು ಹಿಡಿದ ಅತ್ಯುತ್ತಮ ಕ್ಯಾಚ್‍ಗೆ ಬಲಿಯಾದರು. ನಂತರ ಡುಪ್ಲೆಸಿಸ್ (72 ರನ್, 37 ಎಸೆತ, 7 ಸಿಕ್ಸರ್, 1 ಬೌಂಡರಿ) ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರೂ ತಂಡವನ್ನು ದಡ ಮುಟ್ಟಿಸುವಲ್ಲಿ ವಿಫಲರಾದರು. ಇನ್ನಿಂಗ್ಸ್‍ನ ಅಂತಿಮ ಎಸೆತದವರೆಗೂ ಕ್ರೀಸಿನಲ್ಲಿದ್ದ ನಾಯಕ ಧೋನಿ ಕೈಯಲ್ಲಿ ಪಂದ್ಯ ಗೆಲ್ಲಿಸಲು ಸಾಧ್ಯವಾಗದೆ ಕೊನೆಗೂ 16 ರನ್‍ಗಳಿಂದ ರಾಜಸ್ಥಾನ್ ತಂಡಕ್ಕೆ ಸಿಎಸ್‍ಕೆ ಶರಣಾಯಿತು. ರಾಯಲ್ಸ್ ಪರ ರಾಹುಲ್ ತೆವಾತಿಯಾ 37 ರನ್ ನೀಡಿ 3 ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶವನ್ನು ರಾಜಸ್ಥಾನ್ ರಾಯಲ್ ತಂಡಕ್ಕೆ ನೀಡಿತು. ರಾಜಸ್ಥಾನ ಪರವಾಗಿ ಆರಂಭಿಕ ದಾಂಡುಗಾರರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಸ್ಮಿತ್ ಚೆನ್ನೈ ಬೌಲರ್‍ಗಳನ್ನು ಮನ ಬಂದಂತೆ ಚಚ್ಚಿದರು. ಸಿನ್ನರ್‍ಗಳನ್ನು ಸರಿಯಾಗಿ ದಂಡಿಸಿದ ಈ ಜೋಡಿ ಚಾವ್ಲಾ ಮತ್ತು ಜಡೇಜಾ ಅವರು ಎಸೆದ 8 ಓವರಿನಲ್ಲಿ ಬರೋಬ್ಬರಿ 95 ರನ್ ಚಚ್ಚಿದರು. ಇದರಲ್ಲಿ ಚಾವ್ಲಾ ಅವರ ಒಂದೇ ಓವರಿನಲ್ಲಿ ನಾಲ್ಕು ಸಿಕ್ಸರ್ ಸಮೇತ 28 ರನ್ ಭಾರಿಸಿದರು.
ಇನ್ನಿಂಗ್ಸ್‍ನ ಅಂತಿಮ ಓವರಿನಲ್ಲಿ ಸಿಡಿಲಾದ ಜೋಫ್ರಾ ಆರ್ಚರ್ ಲುಂಗಿ ಎನ್‍ಜಿಡಿ ಅವರ ಓವರಿನಲ್ಲಿ ಸಿಕ್ಸರ್‍ಗಳ ಮಳೆಗೈದರು. 19ನೇ ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ 186 ರನ್ ಗಳಿಸಿತ್ತು. 20ನೇ ಓವರಿನ ಮೊದಲ ಎಸೆತವನ್ನು ಸಿಕ್ಸರ್‍ಗೆ ಅಟ್ಟಿದ ಆರ್ಚರ್ ಸತತವಾಗಿ 4 ಸಿಕ್ಸರ್ ಸಿಡಿಸಿದರು. ಈ ಮೂಲಕ ತಂಡವನ್ನು 200 ರನ್‍ಗಳ ಗಡಿ ದಾಟಿಸಿದರು. ಕೊನೆಯ ಓವರಿನಲ್ಲಿ ರಾಯಲ್ಸ್ ತಂಡಕ್ಕೆ ಬರೋಬ್ಬರಿ 30 ರನ್ ಹರಿದು ಬಂತು.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ದೀಪಕ್ ಚಹರ್, ಕೇವಲ ಆರು ರನ್ ಗಳಿಸಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಬಲಿ ಪಡೆದರು. ನಂತರ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ಸ್ಟೀವನ್ ಸ್ಮಿತ್ ಉತ್ತಮ ಜೊತೆಯಾಟವಾಡಿದರು. ಪವರ್ ಪ್ಲೇ ಮುಕ್ತಾಯದ ವೇಳೆಗೆ ರಾಜಸ್ಥಾನ್ ತಂಡ 54 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿತ್ತು. ಉತ್ತಮವಾಗಿ ಆಡಿದ ಸಂಜು ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
ನಂತರದ ಓವರ್‍ಗಳಲ್ಲಿ ಸಿಕ್ಸರ್-ಬೌಂಡರಿಗಳ ಸುರಿಮಳೆಗೈದ ಸಂಜು ಸ್ಯಾಮ್ಸನ್ ಮತ್ತು ಸ್ಟೀವನ್ ಸ್ಮಿತ್ ಅವರು 10 ಓವರ್ ಮುಕ್ತಾಯಕ್ಕೆ ಬರೋಬ್ಬರಿ 119 ರನ್ ಸಿಡಿಸಿದರು. ಈ ಮೂಲಕ ಐಪಿಎಲ್-2020ಯ ಪ್ರಥಮ ಶತಕದ ಜೊತೆಯಾಟವನ್ನು ದಾಖಲಿಸಿದರು. ಆದರೆ 9 ಸಿಕ್ಸ್ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು ಲುಂಗಿ ಎನ್‍ಜಿಡಿ ಅವರ ಬೌಲಿಂಗ್‍ನಲ್ಲಿ 32 ಎಸೆತಗಳಲ್ಲಿ 74 ರನ್ ಸಿಡಿಸಿ ಔಟ್ ಆದರು.
ನಂತರ ಕಣಕ್ಕಿಳಿದ ಡೇವಿಡ್ ಮಿಲ್ಲರ್ ಅವರು ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಬಳಿಕ ಬಂದ ರಾಬಿನ್ ಉತ್ತಪ್ಪ ದೊಡ್ಡ ಹೊಡೆತಕ್ಕೆ ಕೈಹಾಕಿ 14ನೇ ಓವರಿನಲ್ಲಿ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಕ್ರೀಸಿಗೆ ಬಂದ ರಾಹುಲ್ ತೇವಟಿಯಾ ಸ್ಯಾಮ್ ಕರ್ರನ್ ಅವರಿಗೆ ಬಲಿಯಾದರು. ರಿಯಾನ್ ಪರಾಗ್ ಅವರು ಕೇವಲ 6 ರನ್ ಹೊಡೆದು ಪೆವಿಲಿಯನ್ ಸೇರಿಕೊಂಡರು.
ಪಂದ್ಯದ ಆರಂಭದಿಂದಲೂ ತಾಳ್ಮೆಯ ಆಟಕ್ಕೆ ಮಾರು ಹೋಗಿದ್ದ ನಾಯಕ ಸ್ಮಿತ್ 47 ಎಸೆತದಲ್ಲಿ 69 ರನ್ ಭಾರಿಸಿದರು. 146.81ರ ಸ್ಟ್ರೈಕ್ ರೇಟ್‍ನಲ್ಲಿ ಬ್ಯಾಟ್ ಬೀಸಿದ ಸ್ಮಿತ್ ನಾಲ್ಕು ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ನಂತರ ಕೊನೆಯ ಓವರಿನಲ್ಲಿ ಅಬ್ಬರಿಸಿದ ಆರ್ಚರ್ ಸಿಕ್ಸರ್‍ಗಳ ಸುರಿಮಳೆ ಸುರಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 200ರ ಗಡಿ ದಾಟಿಸಿದರು.
0 comments:
Post a Comment