ಪುತ್ತೂರು, ಸೆ. 23, 2020 (ಕರಾವಳಿ ಟೈಮ್ಸ್) : ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ-ಬೆದ್ರಾಳ ಭಗತ್ ಸಿಂಗ್ ರಸ್ತೆಯಲ್ಲಿ ಮಂಗಳವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಪುತ್ತೂರು ನಗರ ಠಾಣಾ ಪೊಲೀಸರು ದ್ವಿಚಕ್ರ ವಾಹನ, ಗಾಂಜಾ ಸಹಿತ ಓರ್ವನನ್ನು ದಸ್ತಗಿರಿ ಮಾಡಿದ್ದು, ಮತ್ತೋರ್ವ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ಇಲ್ಲಿನ ಭಗತ್ ಸಿಂಗ್ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಪ್ಪು ಬಣ್ಣದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಠಾಣಾ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, ಈ ವೇಳೆ ಆರೋಪಿ ನರಿಮೊಗರು ಗ್ರಾಮದ ಸಾಝಿಲ್ ಅಹಮ್ಮದ್ ಪ್ರಾಯ (24) ಎಂಬಾತನನ್ನು ಬೆನ್ನಟ್ಟಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮತ್ತೋರ್ವ ಆರೋಪಿ ಕೆಮ್ಮಿಂಜೆ ಗ್ರಾಮದ ನಿವಾಸಿ ಮಹಮ್ಮದ್ ಅಶ್ರಫ್ ಎಂಬಾತ ಪರಾರಿಯಾಗಿದ್ದಾನೆ.
ಬಂಧಿತನಿಂದ ದ್ವಿಚಕ್ರ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ವಾಹನ, ಸುಮಾರು 3000 ರೂಪಾಯಿ ಮೌಲ್ಯದ 166 ಗ್ರಾಂ ಗಾಂಜಾ, ಸುಮಾರು 12 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಪೋನ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 8(ಸಿ), 20(ಬಿ), II ಎ.ಎನ್.ಡಿ.ಪಿ.ಎಸ್ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment