ಪುತ್ತೂರು, ಸೆ. 18, 2020 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಸಭೆಯಲ್ಲಿ 2019 ರಲ್ಲಿ ರಸ್ತೆಗುಂಡಿ ಮುಚ್ಚುವ (ಪ್ಯಾಚ್ ವರ್ಕ್) ಕಾಮಗಾರಿ ಹೆಸರಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ನಗರಸಭಾ ಮಾಜಿ ವಿಪಕ್ಷ ನಾಯಕ ಎಚ್. ಮಹಮ್ಮದ್ ಅಲಿ ಅವರು ನಗರ ಸಭಾ ಪೌರಾಯುಕ್ತೆ ರೂಪ ಟಿ ಶೆಟ್ಟಿ ಹಾಗೂ ಇಂಜಿನಿಯರ್ ಕೆ. ದಿವಾಕರ ಅವರ ವಿರುದ್ದ ನೀಡಿರುವ ಕರ್ನಾಟಕ ಲೋಕಾಯುಕ್ತರಿಗೆ ದೂರಿನ ಹಿನ್ನಲೆಯಲ್ಲಿ ಬೆಂಗಳೂರು ಲೋಕಾಯುಕ್ತ ತಾಂತ್ರಿಕ ವಿಭಾಗದ ಅಧಿಕಾರಿ ಗುರುಪ್ರಸಾದ್ ಜೆ.ಡಿ. ನೇತೃತ್ವದ ಅಧಿಕಾರಿಗಳ ತಂಡ ಇತ್ತೀಚೆಗೆ ಪುತ್ತೂರು ನಗರಸಭೆಗೆ ಭೇಟಿ ನೀಡಿ ಕಡತ ಪರಿಶೀಲಿಸಿದರಲ್ಲದೆ ಬಳಿಕ ಕಾಮಗಾರಿಯ ಸ್ಥಳ ತನಿಖೆ ನಡೆಸಿದ್ದಾರೆ.
ಜಯಂತಿ ಬಲ್ನಾಡ್ ಅವರ ನಗರಸಭೆಯ ಅಧ್ಯಕ್ಷರಾಗಿದ್ದಾಗ 2018ರಲ್ಲಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಗರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳ ರಸ್ತೆ ತೇಪೆ ಕಾಮಗಾರಿ ನಡೆಸಲಾಗಿರುತ್ತದೆ. ಆದರೆ 2019 ರಲ್ಲಿ ಪುನಃ ರಸ್ತೆ ತೇಪೆ ಕಾಮಗಾರಿ ನಡೆಸಲೆಂದು 20 ಲಕ್ಷ ರೂಪಾಯಿಯ ಅಂದಾಜು ವೆಚ್ಚ ಸಿದ್ದಪಡಿಸಿ ರಸ್ತೆಗಳ 700 ಗುಂಡಿಯನ್ನು ಮುಚ್ಚಲಾಗಿದೆ ಎಂದು ಅಳತೆ ಪುಸ್ತಕ (ಎಂಬಿ) ದಲ್ಲಿ ದಾಖಲಿಸಿ, ಬಿಲ್ಲು ಮಾಡಲಾಗಿದೆ. 2018 ರಲ್ಲಿ ನಡೆದಿರುವ ರಸ್ತೆ ತೇಪೆ ಕಾಮಗಾರಿಗಳನ್ನು ಹಾಗೂ ಅದರ ಫೆÇೀಟೋಗಳನ್ನು 2019ರ ಕಾಮಗಾರಿಯಲ್ಲಿ ತೋರಿಸಲಾಗಿದೆ. ವಾಸ್ತವವಾಗಿ ರಸ್ತೆ ಪ್ಯಾಚ್ ಕಾಮಗಾರಿ ರೋಡ್ ರೋಲರ್ ಮೂಲಕ ಮ್ಯಾನ್ವೆಲ್ ಮೂಲಕ ನಡೆಸಲಾಗುತ್ತದೆ. ಆದರೆ ಈ ರಸ್ತೆ ತೇಪೆ ಕಾಮಗಾರಿಯನ್ನು ಪೇವರ್ ಫಿನಿಶಿಂಗ್ ಯಂತ್ರದಲ್ಲಿ ನಡೆಸಲಾಗಿದೆ ಎಂದು ಬಿಲ್ಲು ಮಾಡಲಾಗಿರುತ್ತದೆ. ಸರಕಾರದ ಎಸ್.ಆರ್. ರೇಟ್ ಪ್ರಕಾರ ರೋಡ್ ರೋಲರ್‍ನಲ್ಲಿ ಮ್ಯಾನ್ ವೆಲ್ ಮೂಲಕ ನಡೆಸುವ ಕಾಮಗಾರಿಗಿಂತ ದುಪ್ಪಟ್ಟು ದರ ಈ ಪೇವರ್ ಫಿನಿಶಿಂಗ್ ಕಾಮಗಾರಿಗಿದೆ. ಈ ಪ್ಯಾಚ್ ವರ್ಕ್ ಕಾಮಗಾರಿಯನ್ನು ರೋಡ್ ರೋಲರ್‍ನಿಂದ ಮ್ಯಾನ್ವೆಲ್ ಮೂಲಕ ನಡೆಸಿ ಪೇವರ್ ಫಿನಿಶಿಂಗ್ ಯಂತ್ರದಲ್ಲಿ ನಡೆಸಲಾಗಿದೆ ಎಂದು ದುಪ್ಪಟ್ಟು ಬಿಲ್ಲು ಮಾಡಲಾಗಿರುತ್ತದೆ. ರಸ್ತೆಯ ಸಣ್ಣ ಸಣ್ಣ ತೇಪೆ ಕಾಮಗಾರಿಗಳನ್ನು ಪೇವರ್ ಯಂತ್ರದಲ್ಲಿ ಮಾಡಲು ಆಗುವುದಿಲ್ಲ.
ಹಣ ದುರುಪಯೋಗ ಮಾಡುವ ದುರುದ್ದೇಶದಿಂದ ದುಪ್ಪಟ್ಟು ದರದ ಪೇವರ್ ಫಿನಿಶಿಂಗ್ ಎಸ್ಟಿಮೇಟ್ ಮಾಡಿ ಆ ದರದಲ್ಲಿ ಬಿಲ್ಲು ಮಾಡಲಾಗಿದೆ. ಎಸ್ಟಿಮೇಟ್‍ನಲ್ಲಿ ತೋರಿಸಿರುವಂತೆ ಗುಣಮಟ್ಟದ ಕಾಮಗಾರಿ ನಡೆಸದೆ ಕಳಪೆ ಕಾಮಗಾರಿ ನಡೆಸಲಾಗಿ ಅಂದಾಜು ಸುಮಾರು 8 ಲಕ್ಷ ರೂಪಾಯಿ ಕಾಮಗಾರಿ ನಡೆಸಿ 17.50 ಲಕ್ಷ ರೂಪಾಯಿ ಬಿಲ್ಲು ಮಾಡಿ ಅವ್ಯವಹಾರ ನಡೆಸಲಾಗಿದೆ ಎಂದು ನಗರಸಭಾ ಮಾಜಿ ಸದಸ್ಯ ಮುಹಮ್ಮದ್ ಅಲಿ ಅವರು ಲೋಕಾಯುಕ್ತಕ್ಕೆ ಸಲ್ಲಿಸಲಾಗಿರುವ ದೂರಿನಲ್ಲಿ ಆರೋಪಿದ್ದರು.
ತನಿಖಾಧಿಕಾರಿಗಳಿಗೆ 2018ರ ಹಳೆಯ ಕಾಮಗಾರಿಗಳನ್ನು ತೋರಿಸಿ ತನಿಖೆಯ ಹಾದಿ ತಪ್ಪಿಸಲು ಮುಂದಾದ ಅಧಿಕಾರಿಗಳನ್ನು ಎಚ್. ಮಹಮ್ಮದ್ ಅಲಿ ಅವರು ತರಾಟೆಗೆ ತೆಗೆದುಕೊಂಡಿದ್ದರಲ್ಲದೆ ಲೋಕಾಯುಕ್ತ ಅಧಿಕಾರಿಗಳಿಗೆ ಲಿಖಿತ ಆಕ್ಷೇಪ ಸಲ್ಲಿಸಿ 2019ರಲ್ಲಿ ನಡೆಸಿರುವ ಅಳತೆ ಪುಸ್ತಕ ದಾಖಲಾಗಿರುವ ರಸ್ತೆಗಳ ಕಾಮಗಾರಿಯನ್ನು ಮಾತ್ರ ತನಿಖೆ ನಡೆಸಬೇಕು, ಹಿಂದೆ ಹಳೆ ಕಾಮಗಾರಿ ನಡೆಸಿರುವ ಇಂಜಿನಿಯರ್ ಶ್ರೀಧರ್ ಅವರು ಸ್ಥಳ ತನಿಖೆ ಸಂದರ್ಭದಲ್ಲಿ ಇರಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳ ತನಿಖೆಗೆ ಮೊದಲು ನಗರಸಭಾ ಕಚೇರಿಯಲ್ಲಿ 2018 ಹಾಗೂ 2019 ರ ಕಾಮಗಾರಿಯ ಕಡತವನ್ನು ಪರಿಶೀಸಿದ ಲೋಕಾಯುಕ್ತ ಅಧಿಕಾರಿಗಳು ನಗರಸಭಾ ಮಾಜಿ ಸದಸ್ಯ ಎಚ್. ಮಹಮ್ಮದ್ ಅಲಿ, ಪೌರಾಯುಕ್ತೆ ರೂಪ ಟಿ ಶೆಟ್ಟಿ, ಇಂಜಿನಿಯರ್‍ಗಳಾದ ದಿವಾಕರ್ ಮತ್ತು ಅರುಣ ಅವರ ಹೇಳಿಕೆಗಳನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿರುತ್ತಾರೆ ಎನ್ನಲಾಗಿದೆ.
ಬಳಿಕ 2 ದಿನ ನಡೆದ ಕಾಮಗಾರಿಯ ಸ್ಥಳ ತನಿಖೆಯನ್ನೂ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ. ಈ ಸಂದರ್ಭ ದೂರುದಾರರಾದ ನಗರಸಭಾ ಮಾಜಿ ಸದಸ್ಯ ಎಚ್. ಮಹಮ್ಮದ್ ಅಲಿ ಅವರು ಉಪಸ್ಥಿತರಿದ್ದು, ರಸ್ತೆ ತೇಪೆ ಕಾಮಗಾರಿ ನಡೆಸಿ ಒಂದು ವರ್ಷದಲ್ಲೇ ಡಾಮರು ಕಿತ್ತು ಹೋಗಿರುವ ಕಳಪೆ ಕಾಮಗಾರಿಯ ಬಗ್ಗೆ ಲೋಕಾಯುಕ್ತ ಅಧಿಕಾರಿಗಳ ಗಮನ ಸೆಳೆದಿದ್ದಲ್ಲದೆ, ಬಿಲ್ಲು ಮಾಡಿದ 20 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ತೇಪೆ ಕಾಮಗಾರಿಯ ಬದಲಿಗೆ ರಸ್ತೆಗೆ ಪೂರ್ಣ ಕಾಂಕ್ರಿಟ್ ಕೂಡಾ ಮಾಡಬಹುದಿತ್ತು ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಅಧಿಕಾರಿಗಳ ಸ್ಥಳ ತನಿಖಾ ಸಂದರ್ಭ ನಗರಸಭಾ ಪೌರಾಯುಕ್ತೆ ರೂಪ ಟಿ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ, ಕಿರಿಯ ಅಭಿಯಂತರರಾದ ಕೆ. ದಿವಾಕರ್ ಹಾಗೂ ಶ್ರೀಧರ್ ಮತ್ತು ನಗರಸಭಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
0 comments:
Post a Comment