ಆರೋಪಿಗಳ ವಿರುದ್ದ ಸಂಪ್ಯ ಠಾಣೆಯಲ್ಲಿ ಎಫ್.ಐ.ಆರ್. ದಾಖಲು
ಪುತ್ತೂರು (ಕರಾವಳಿ ಟೈಮ್ಸ್) : ತಾಲೂಕಿನ ಇರ್ದೆ ಸಮೀಪ ಪುತ್ತೂರು ಗ್ರಾಮಾಂತರ ಪೊಲೀಸರು ವಾರದ ಹಿಂದೆ ಅಕ್ರಮ ಸಾಗಾಟದ ಹಿನ್ನಲೆಯಲ್ಲಿ ವಶಪಡಿಸಿಕೊಂಡಿದ್ದ ಜಾನವಾರುಗಳನ್ನು ವಾರೀಸುದಾರರು ಮಂಗಳವಾರ ಸಂಜೆ ನ್ಯಾಯಾಲಯದ ಆದೇಶದ ಮೇರೆಗೆ ಬಿಡಿಸಿಕೊಂಡು ತೆರಳುತ್ತಿದ್ದ ವೇಳೆ ರಾತ್ರಿ ಸುಮಾರು 6.30 ರ ವೇಳೆಗೆ ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ನ್ಯಾಯಾಲಯದ ಆದೇಶ ಪತ್ರ ತೋರಿಸಿದರೂ ಅಡ್ಡಗಟ್ಟಿ ನೈತಿಕ ಪೊಲೀಸ್‍ಗಿರಿ ಮೆರೆದ ಹಿಂದೂ ಪರ ಸಂಘಟನೆಗೆ ಸೇರಿದ ಕಾರ್ಯಕರ್ತರಾದ ಯತೀಶ್, ಅನಿಲ್ ಹಾಗೂ ಲಕ್ಷ್ಮಣ ಯಾನೆ ಪುಟ್ಟು ಎಂಬವರ ವಿರುದ್ದ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರ ಎಫ್.ಐ.ಆರ್. ದಾಖಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಎರಡು ವಾರಗಳ ಹಿಂದೆ ಇರ್ದೆ ಸಮೀಪದ ಮಾರುತಿ ಓಮ್ನಿ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಹಸು ಹಾಗೂ ಕರುವನ್ನು ಪತ್ತೆ ಹಚ್ಚಿ ಆರೋಪಿಗಳಾದ ಆರ್ಲಪದವು ನಿವಾಸಿ ಮೂಸಾ ಹಾಗೂ ಬಾಲಕೃಷ್ಣ ಗೌಡ ಎಂಬವರನ್ನು ಬಂಧಿಸಿ ಜಾನುವಾರುಗಳ ಸಹಿತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಆರೋಪಿಗಳು ಜಾಮೀನು ಬಿಡುಗಡೆ ಹೊಂದಿದ್ದು, ಮೂಸಾ ಅವರು ಸವಣೂರು ಗೋಶಾಲೆಗೆ ಒಪ್ಪಿಸಲಾಗಿದ್ದ ಜಾನುವಾರುಗಳನ್ನು ತನ್ನ ವಶಕ್ಕೆ ನೀಡಬೇಕೆಂದು ನ್ಯಾಯವಾದಿ ರಮ್ಲತ್ ಅವರ ಮೂಲಕ ನ್ಯಾಯಾಲಯಕ್ಕೆ ಕೋರಿಕೊಂಡ ಹಿನ್ನಲೆಯಲ್ಲಿ ನ್ಯಾಯಾಧೀಶರು ಹಸು ಹಾಗೂ ಕರುವನ್ನು ಮೂಸಾ ಅವರಿಗೆ ಒಪ್ಪಿಸುವಂತೆ ಆದೇಶ ನೀಡಿದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಹಸು ಹಾಗೂ ಕರುವನ್ನು ಪಡೆದುಕೊಂಡು ಪಿಕಪ್ ಚಾಲಕ ಪಾಣಾಜೆ ಗ್ರಾಮದ ಬೊಳ್ಳಿಂಬಳ ನಿವಾಸಿ ಹಸೈನಾರ್ ಅವರ ಪುತ್ರ ಅಬ್ದುಲ್ ಶಹನಾದ್ ಶಮೀಂ (25) ಅವರು ತನ್ನ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಹೇರಿಕೊಂಡು ಸವಣೂರು ಗೋಶಾಲೆಯಿಂದ ಸಂಟ್ಯಾರು-ಪಾಣಾಜೆ ಮಾರ್ಗ ಮೂಲಕ ಆರ್ಲಪದವು ಕಡೆ ಬರುತ್ತಿದ್ದಾಗ ಸಂಜೆ ಸುಮಾರು 6.30ರ ವೇಳೆಗೆ ಬೆಟ್ಟಂಪಾಡಿ-ರೆಂಜ ಎಂಬಲ್ಲಿಗೆ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಆರೋಪಿಗಳು ಪಿಕಪ್ ಅಡ್ಡಗಟ್ಟಿ, ನ್ಯಾಯಾಲಯದ ಆದೇಶ ಪತ್ರ ತೋರಿಸಿದರೂ ಕ್ಯಾರೇ ಎನ್ನದೆ ಚಾಲಕ ಶಮೀಮನನ್ನು ವಾಹನದಿಂದ ಎಳೆದು ಹಾಕಿ ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಒಡ್ಡಿರುತ್ತಾರೆ. ಈ ಸಂದರ್ಭ ಹಿಂದಿನಿಂದ ವಾಹನದಲ್ಲಿ ಬರುತ್ತಿದ್ದ ಶಮೀಂ ಅವರ ತಂದೆ ಹಸೈನಾರ್ ಹಾಗೂ ಮೂಸಾ ಅವರು ಶಮೀಂನನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಸಂದರ್ಭ ಸ್ಥಳದಲ್ಲಿ ಎರಡೂ ಸಮುದಾಯಕ್ಕೆ ಸೇರಿದ ಜನ ಜಮಾಯಿಸಿದ್ದು, ಆತಂಕದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದ ಸಂಪ್ಯ ಪೊಲೀಸರು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ.
ಈ ಬಗ್ಗೆ ಗಾಯಾಳು ಪಿಕಪ್ ಚಾಲಕ ಶಮೀಂ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ ಪ್ರಕಾರ ಠಾಣೆಯಲ್ಲಿ ಆರೋಪಿಗಳ ವಿರುದ್ದ ಕಲಂ 341, 323, 504, 506 ಆರ್/ಡಬ್ಲ್ಯು 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment