ಪುತ್ತೂರು, ಸೆ. 16, 2020 (ಕರಾವಳಿ ಟೈಮ್ಸ್) : ತಾಲೂಕಿನ ಕೆದಂಬಾಡಿ ಗ್ರಾಮದ ತಿಂಗಳಾಡಿ ಎಂಬಲ್ಲಿನ ಮಾತೃಶ್ರೀ ಕಾಂಪ್ಲೆಕ್ಸ್ ಅಂಗಡಿಯೊಂದರಿಂದ 1 ಲಕ್ಷ ರೂಪಾಯಿ ನಗದು ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸರು ಘಟನೆ ನಡೆದು 48 ಗಂಟೆಗಳಲ್ಲೇ ಪ್ರಕರಣ ಬೇಧಿಸಿ ನಗದು ಸಹಿತ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು, ಇಳಂತಿಲ ಗ್ರಾಮದ, ನೇಜಿಕಾರು-ಅಂಬೊಟ್ಟು ನಿವಾಸಿ ಮುಹಮ್ಮದ್ ಶಾಫಿ (28) ಎಂದು ಗುರುತಿಸಲಾಗಿದೆ. ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ವ್ಯಾಪ್ತಿಯ ತಿಂಗಳಾಡಿಯ ಅಂಗಡಿಯಿಂದ ಸೆ 14 ರಂದು ಲಕ್ಷ ರೂಪಾಯಿ ನಗದು ಕಳವು ಕೃತ್ಯ ನಡೆದಿತ್ತು. ಈ ಬಗ್ಗೆ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/20 ಕಲಂ 380 ಭಾರತೀಯ ದಂಡ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ಠಾಣಾ ಎಸ್ಸೈ, ಉಪ್ಪಿನಂಗಡಿ ಠಾಣೆ, ಪುತ್ತೂರು ಗ್ರಾಮಾಂತರ ವೃತ್ತ ಕಛೇರಿ, ಡಿ.ಸಿ.ಐ.ಬಿ. ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ತನಿಖಾ ತಂಡ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯಿಂದ ಕಳವಾಗಿದ್ದ 1 ಲಕ್ಷ ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ಕೆಎ21 ಯು6006 ನೋಂದಣಿ ಸಂಖ್ಯೆಯ ಮೋಟಾರ್ ಸೈಕಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮಹಮ್ಮದ್ ಶಾಫಿ ವಿರುದ್ಧ ಬೆಳ್ತಂಗಡಿ, ಪುತ್ತೂರು ನಗರ, ವಿಟ್ಲ, ಕಾರ್ಕಳ ಗ್ರಾಮಾಂತರ, ಉಡುಪಿ ನಗರ, ಮಂಗಳೂರಿನ ಬಂದರು ಪೆÇಲೀಸ್ ಠಾಣೆಯಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment