ನವದೆಹಲಿ, ಸೆ. 08, 2020 (ಕರಾವಳಿ ಟೈಮ್ಸ್) : ಪಬ್ ಜಿ ಗೇಮ್ ಹುಚ್ಚಿಗಾಗಿ ಅಪ್ರಾಪ್ತ ಬಾಲಕನೋರ್ವ ತನ್ನ ಅಜ್ಜನ ಬ್ಯಾಂಕ್ ಖಾತೆಗೇ ಕನ್ನ ಹಾಕಿದ್ದು, ಬರೋಬ್ಬರಿ 2.34 ಲಕ್ಷ ರೂಪಾಯಿ ಪೆನ್ಶನ್ ಹಣವನ್ನೇ ಲಪಟಾಯಿಸಿದ ಆಘಾತಕಾರಿ ಪ್ರಕರಣವನ್ನು ದೆಹಲಿ ಸೈಬರ್ ಪೊಲೀಸರು ಬೇಧಿಸಿದ್ದಾರೆ.
15 ವರ್ಷದ ಬಾಲಕ ತನ್ನ ಅಜ್ಜನ ಪೆನ್ಶನ್ ಖಾತೆಯಿಂದ 2.34 ಲಕ್ಷ ರೂಪಾಯಿ ಹಣವನ್ನು ಪಬ್ ಜಿ ಫಂಡ್‍ಗಾಗಿ ವರ್ಗಾಯಿಸಿಕೊಂಡಿದ್ದಾನೆ. ಅಲ್ಲದೆ ಆ ಹಣದಲ್ಲಿ ತಿಂಗಳುಗಟ್ಟಲೆ ಪಬ್‍ಜಿ ಆಡಿದ್ದಾನೆ ಎಂದು ದೆಹಲಿಯ ಸೈಬರ್ ಸೆಲ್ ಪೊಲೀಸರು ಮಾಹಿತಿ ನೀಡಿದ್ದಾರೆ.
ನಿಮ್ಮ ಖಾತೆಯಿಂದ 2,500 ರೂಪಾಯಿ ಕಡಿತವಾಗಿದ್ದು, ನಿಮ್ಮ ಅಕೌಂಟ್ ಬ್ಯಾಲೆನ್ಸ್ 275 ರೂಪಾಯಿ ಎಂದು ಬ್ಯಾಂಕಿನಿಂದ ಅಜ್ಜನಿಗೆ ಮೆಸೇಜ್ ಬಂದಿದ್ದು, ಆಗಲೇ ಅಜ್ಜನಿಗೆ ಲಕ್ಷಾಂತರ ರೂಪಾಯಿ ಖೋತಾ ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಈ ಕುರಿತು ಅವರು ಬ್ಯಾಂಕಿನಲ್ಲಿ ವಿಚಾರಿಸಿದ್ದು, 2.34 ಲಕ್ಷ ರೂಪಾಯಿ ಹೇಗೆ ಟ್ರಾನ್ಸ್‍ಫರ್ ಆಯಿತು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ನಂತರ ಅಜ್ಜ ಹಣ ವರ್ಗಾವಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದು, ನಾನು ಯಾವುದೇ ರೀತಿಯ ನಗದು ವಹಿವಾಟು ನಡೆಸಿಲ್ಲ. ಅಲ್ಲದೆ ಯಾವುದೇ ಒಟಿಪಿ ಸಹ ನನಗೆ ಬಂದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಪೊಲೀಸರು ಉತ್ತರಿಸಿ, ಕಳೆದ ಎರಡು ತಿಂಗಳ ಅವಧಿಯಲ್ಲಿ 2,34,497 ರೂಪಾಯಿಗಳನ್ನು ನಿಮ್ಮ ಬ್ಯಾಂಕ್ ಖಾತೆಯಿಂದ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಂಕಜ್ ಕುಮಾರ್ (23) ಹೆಸರಿನ ಪೇಟಿಎಂ ಖಾತೆಯಿಂದ ಹಣ ವರ್ಗಾವಣೆಯಾಗಿರುವ ಕುರಿತು ಪೊಲೀಸರು ಪತ್ತೆ ಹಚ್ಚಿದ್ದಾರೆ. ನಂತರ ಸೈಬರ್ ಸೆಲ್ ಪೊಲೀಸರು ಪಂಕಜ್ ಕುಮಾರನನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ನನ್ನ ಸ್ನೇಹಿತನೊಬ್ಬ ಪೇಟಿಎಂ ಪಾಸ್‍ವರ್ಡ್ ಹಾಗೂ ಐಡಿ ನೀಡಿ ಹಣ ವರ್ಗಾವಯಿಸುವಂತೆ ತಿಳಿಸಿದ ಎಂದು ವಿಚಾರಣೆ ವೇಳೆ ಹೇಳಿದ್ದಾನೆ.
ಈ ವೇಳೆ ಅಜ್ಜನ ಮೊಮ್ಮಗನೇ ಪಬ್‍ಜಿ ಆಡಲು ಪಂಕಜ್ ಕುಮಾರ್ ಖಾತೆ ಮೂಲಕ ಗೂಗಲ್ ಪೇನಲ್ಲಿ ಹಣ ಪಾವತಿಸಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ನಂತರ 15 ವರ್ಷದ ಬಾಲಕ ಪೊಲೀಸರಿಗೆ ಶರಣಾಗಿದ್ದಾನೆ. ಪಬ್ ಜಿ ಆಡಲು ಅಜ್ಜನ ಪೆನ್ಶನ್ ಖಾತೆಯಿಂದ ಹಣ ವರ್ಗಾಯಿಸಿರುವುದಾಗಿ ಹೇಳಿದ್ದಾನೆ. ಅಲ್ಲದೆ ಅಜ್ಜನ ಮೊಬೈಲ್‍ಗೆ ಬಂದ ಒಟಿಪಿ ಮೆಸೇಜ್‍ಗಳನ್ನು ತಾನೇ ಡಿಲೀಟ್ ಮಾಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ.
0 comments:
Post a Comment