ಬೆಂಗಳೂರು, ಸೆ. 24, 2020 (ಕರಾವಳಿ ಟೈಮ್ಸ್) : ಕೊರೋನಾ ಹಾಗೂ ಲಾಕ್‍ಡೌನ್ ಬಳಿಕ ಖಾಸಗಿ ಶಾಲಾ ಮಕ್ಕಳು ಸರಕಾರಿ ಶಾಲೆಗೆ ದಾಖಲಾಗುತ್ತಿರುವ ಸನ್ನಿವೇಶ ಹೆಚ್ಚಾಗುತ್ತಿದೆ. ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಈ ಬೆಳವಣಿಗೆ ಹೆಚ್ಚಾಗಿದ್ದು, ಕೋವಿಡ್-19 ಹಾಗೂ ಬಳಿಕ ಹೇರಲ್ಪಟ್ಟ ಲಾಕ್‍ಡೌನ್ ಕಾರಣದಿಂದ ಉದ್ಯೋಗ ಕಳೆದುಕೊಂಡು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪೋಷಕರು ನಗರ-ಪಟ್ಟಣಗಳಿಂದ ಹಳ್ಳಿಗಳಿಗೆ ವಲಸೆ ಬರುತ್ತಿರುವ ಪ್ರಕರಣ ಹೆಚ್ಚಾಗುತ್ತಿದ್ದಂತೆ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಖಾಸಗಿ ಶಾಲೆಗಳ ಕಡೆಯಿಂದ ದೊರೆಯುತ್ತಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆ ತೊರೆದು ಸರಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ ಎಂದು ತಿಳಿದು ಬರುತ್ತಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ಪ್ರವೇಶ ಪ್ರಕ್ರಿಯೆ ಮುಗಿದ ನಂತರ ಅಂದರೆ ಅಕ್ಟೋಬರ್ 10ರ ಬಳಿಕ ಈ ಬಗ್ಗೆ ಸ್ಪಷ್ಟ ಅಂಕಿ ಅಂಶ ದೊರೆಯಲಿದೆ ಎಂದಿದ್ದಾರೆ. ರಾಜ್ಯದ 53 ಸಾವಿರ ಸರಕಾರಿ ಶಾಲೆಗಳಲ್ಲಿ ಹೊಸ ವಿದ್ಯಾರ್ಥಿಗಳ ಪ್ರವೇಶಕ್ಕೆ ಕಾಯಕಲ್ಪ ಒದಗಿಸಲಾಗಿದೆ ಎಂದವರು ತಿಳಿಸಿದರು.
ಕೋವಿಡ್-19 ಲಾಕ್‍ಡೌನ್‍ನಿಂದ ಉದ್ಯೋಗ ಕಳೆದುಕೊಂಡವರು, ಆರ್ಥಿಕ ಸಂಕಷ್ಟ ಎದುರಿಸಿದವರು ಉಚಿತ ಊಟ, ಯೂನಿಫಾರ್ಮ್, ಪುಸ್ತಕ ಮೊದಲಾದ ಸೌಲಭ್ಯಗಳು ಸರಕಾರಿ ಶಾಲೆಗಳಲ್ಲಿ ಸಿಗುತ್ತಿರುವುದರಿಂದ ಹೆಚ್ಚಾಗಿ ಸರಕಾರಿ ಶಾಲೆಗಳತ್ತ ಆಕರ್ಷಿತರಾಗುತ್ತಾರೆ ಎನ್ನಲಾಗುತ್ತಿದೆ.
ಪೋಷಕರು ಕೂಲಿ-ನಾಲಿ ಮಾಡಿಕೊಂಡಿದ್ದರೂ ತಮ್ಮ ಮಕ್ಕಳು ಮಾತ್ರ ಐಶಾರಾಮಿ ವ್ಯವಸ್ಥೆ ಇರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿಯೇ ವ್ಯಾಸಂಗ ಮಾಡಬೇಕು ಎಂಬ ಹುಂಬತನ ತೋರುತ್ತಾ ಸರಕಾರಿ ಶಾಲೆಗಳಲ್ಲಿ ಸಕಲ ವ್ಯವಸ್ಥೆಗಳಳಿದ್ದರೂ ಮನೆ ಸಮೀಪದಲ್ಲೇ ಉತ್ತಮ ಫಲಿತಾಂಶ ಬರುವ ಸರಕಾರಿ ಶಾಲೆಗಳು ಇದ್ದರೂ ಅವುಗಳ ಬಗ್ಗೆ ಕಣ್ಣೆತ್ತಿಯೂ ನೋಡದೆ ದೂರದ ಖಾಸಗಿ ಶಾಲೆಗಳಿಗೆ ಸಾವಿರಾರು, ಲಕ್ಷಾಂತರ ರೂಪಾಯಿ ಡೊನೇಷನ್ ನೀಡಿ ತಮ್ಮ ಮಕ್ಕಳನ್ನು ಕಳಿಸುತ್ತಿದ್ದ ವ್ಯವಸ್ಥೆಗೆ ಕೊರೋನಾ ವೈರಸ್ ಹಾಗೂ ಲಾಕ್‍ಡೌನ್ ಬಹುತೇಕ ತೆರೆ ಎಳೆದಿದೆ ಎಂದೇ ಹೇಳಬಹುದು. ಆರ್ಥಿಕ ದಿವಾಳಿತನ ಪೆÇೀಷಕರ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹಕ್ಕೆ ತೆರೆ ಎಳೆಯುವಂತೆ ಮಾಡಿದೆ ಎನ್ನಲಾಗುತ್ತಿದೆ.
0 comments:
Post a Comment