ಮಾಜಿ ಸಚಿವ ರೈ ಸ್ವಕ್ಷೇತ್ರ ಬಂಟ್ವಾಳದಲ್ಲಿ ಪಕ್ಷ ಸಂಘಟನೆಗೆ ವೇಗ ನೀಡುತ್ತಿರುವ ಕಾಂಗ್ರೆಸ್
ಪಕ್ಷದ ತಳಮಟ್ಟದ ಘಟಕಗಳಿಗೆ ಹೊಸ ಮುಖಗಳಿಗೆ ಆದ್ಯತೆ ನೀಡುತ್ತಿರುವ ಪಕ್ಷ ನಾಯಕರು
ಬಂಟ್ವಾಳ, ಸೆ. 13, 2020 (ಕರಾವಳಿ ಟೈಮ್ಸ್) : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಇಬ್ರಾಹಿಂ ನವಾಝ್ ಬಡಕಬೈಲು ಅವರನ್ನು ನೇಮಕಗೊಳಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಶನಿವಾರ ಆದೇಶ ಹೊರಡಿಸಿದ್ದಾರೆ.
ಯುವ ಕಾಂಗ್ರೆಸ್ ಸಮಿತಿಗೆ ಈ ಹಿಂದೆ ಕೆಲ ವರ್ಷಗಳಿಂದ ರಾಹುಲ್ ಗಾಂಧಿ ಅವರ ಆಶಯದಂತೆ ಚುನಾವಣೆ ನಡೆಸುವ ಮೂಲಕ ಅಧ್ಯಕ್ಷ-ಪದಾಧಿಕಾರಿಗಳ ಆಯ್ಕೆ ನಡೆಸಲಾಗುತ್ತಿತ್ತು. ಆದರೆ ಈ ಚುನಾವಣಾ ಪ್ರಕ್ರಿಯೆಗೆ ಕೆಲವೊಂದು ಅಪಸ್ವರಗಳು ಕೇಳಿ ಬಂದ ಹಿನ್ನಲೆಯಲ್ಲಿ ಇದೀಗ ಚುನಾವಣಾ ಪ್ರಕ್ರಿಯೆ ಕೈ ಬಿಟ್ಟು ನೇರ ನೇಮಕಾತಿ ನಡೆಸಲಾಗುತ್ತಿದೆ. ಅಲ್ಲದೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇಮಕವನ್ನೂ ರದ್ದುಗೊಳಿಸಿ ಬ್ಲಾಕ್ ಮಟ್ಟದಲ್ಲಿ ಇದೀಗ ಯುವ ಕಾಂಗ್ರೆಸ್ ಅಧ್ಯಕ್ಷ-ಪದಾಧಿಕಾರಿಗಳ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಪಕ್ಷದ ಈ ನೂತನ ಯೋಜನೆಯಂತೆ ಪಾಣೆಮಂಗಳೂರು ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್‍ಗೆ ಮೊದಲ ಅಧ್ಯಕ್ಷರನ್ನು ನೇಮಕಗೊಳಿಸಿ ಆದೇಶಿಸುವ ಮೂಲಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಪಕ್ಷ ಸಂಘಟನೆಗೆ ಚಾಲನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಬ್ಲಾಕ್ ಮಟ್ಟದ ಯುವ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಚಾಲನೆ ನೀಡಿದಂತೆ ಪಾಣೆಮಂಗಳೂರು ಬ್ಲಾಕ್ ಮಟ್ಟದ ಮೊದಲ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಉತ್ಸಾಹಿ ಯುವ, ಸಕ್ರಿಯ ಕಾರ್ಯಕರ್ತ ಇಬ್ರಾಹಿಂ ನವಾಝ್ ಅಧಿಕೃತವಾಗಿ ನೇಮಕಗೊಂಡಿದ್ದು, ಮಾಜಿ ಸಚಿವ ಬಿ ರಮಾನಾಥ ರೈ ಅವರ ಶಿಫಾರಸ್ಸಿನಂತೆ, ಜಿ ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ಅವರ ಸೂಚನೆ ಮೇರೆಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಇಬ್ರಾಹಿಂ ನಮಾಝ್ ಅವರನ್ನು ನೇಮಕಗೊಳಿಸಿದ್ದಾರೆ.
ಕರಿಯಂಗಳ ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾಗಿ ಪಕ್ಷದ ತಳಮಟ್ಟದ ಸಂಘಟನೆಗಾಗಿ ಪಾಣೆಮಂಗಳೂರು ಬ್ಲಾಕ್ ವ್ಯಾಪ್ತಿಯಲ್ಲಿ ಸಕ್ರಿಯ ಸೇವೆ ಸಲ್ಲಿಸಿದ್ದಕ್ಕಾಗಿ ಅವರನ್ನು ಪಕ್ಷದ ನಾಯಕರು ಯುವ ಘಟಕದ ಅಧ್ಯಕ್ಷಗಿರಿಗೆ ನೇಮಗೊಳಿಸಿದ್ದಾರೆ.
0 comments:
Post a Comment