ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ, ನೂತನ ಇನ್ಸ್‍ಪೆಕ್ಟರ್ ಆಗಿ ಮಹೇಶ್ ಪ್ರಸಾದ್ ನೇಮಕ
ಮಂಗಳೂರು, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲೇ ಭಾರೀ ದೊಡ್ಡ ರೀತಿಯಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣದ ಕಬಂಧ ಬಾಹು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇರುವುದನ್ನು ಪತ್ತೆ ಹಚ್ಚಿದ್ದ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬೆನ್ನು ಬಿದ್ದು ಒಬ್ಬೊಬ್ಬರನ್ನಾಗಿಯೇ ವಶಕ್ಕೆ ಪಡೆದು ಪಡೆದುಕೊಂಡು ವಿಚಾರಣೆ ಹಂತದಲ್ಲಿರುವಾಗಲೇ ಇದೀಗ ಪೊಲೀಸ್ ಇಲಾಖೆಯಲ್ಲಿ ದಿಢೀರ್ ವರ್ಗಾವಣೆ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿದೆ.
ಜಿಲ್ಲೆಯಲ್ಲಿ ಡ್ರಗ್ಸ್ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಅವರಿಗೆ ದಿಢೀರ್ ಆಗಿ ವರ್ಗಾವಣೆ ಆಗಿದ್ದು, ಅವರ ಸ್ಥಾನಕ್ಕೆ ಕಾಪು ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.
ಈಗಾಗಲೇ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಕೆಲವರನ್ನು ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆ ಬಳಿಕ ಅನುಶ್ರೀಯನ್ನು ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಅವರು ವಿಚಾರಣೆ ನಡೆಸಿದ್ದರು. ಡ್ರಗ್ಸ್ ಪ್ರಕರಣ ಬೇಧಿಸಿ ವಿಚಾರಣೆ ಹಂತದಲ್ಲಿರುವಾಗಲೇ ಇದೀಗ ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಅವರನ್ನು ದಿಢೀರ್ ಆಗಿ ಯಾವ ಕಾರಣಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬುದು ಗೊತ್ತಾಗಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಗುಸುಗುಸಿಗೂ ಕಾರಣವಾಗಿದೆ.
ಸಿಸಿಬಿ ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದ್ದು, ಬಂಟ್ವಾಳ, ಪುತ್ತೂರು ಸಹಿತ ಜಿಲ್ಲೆಯ ವಿವಿಧೆಡೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಪ್ರಸ್ತುತ ಕಾಪು ಪೊಲೀಸ್ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಆಗಿರುವ ಮಹೇಶ್ ಪ್ರಸಾದ್ ಅವರನ್ನು ಮಂಗಳೂರು ಸಿಸಿಬಿಗೆ ವರ್ಗಾಯಿಸಲಾಗಿದೆ.
0 comments:
Post a Comment