ಸಜಿಪಮೂಡ ಗ್ರಾಮ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಸಾರ್ವಜನಿಕ ಆಕ್ರೋಶ
ಬಂಟ್ವಾಳ, ಸೆ. 23, 2020 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮೂಡ ಗ್ರಾಮದ ಬೊಳ್ಳಾಯಿ-ಮಂಚಿ-ಕಲ್ಲಡ್ಕ-ಅಮ್ಟೂರು ಸಂಪರ್ಕ ಕಲ್ಪಿಸುವ ರಸ್ತೆ ಕೋಮಾಲಿ ಎಂಬಲ್ಲಿ ಅಸಮರ್ಪಕ ಕಾಮಗಾರಿಯಿಂದಾಗಿ ವಾಹನ ಹಾಗೂ ಜನ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿ ತಲುಪಿದ್ದು, ಈ ಬಗ್ಗೆ ಕೇಳುವ ಗತಿ ಇಲ್ಲದಂತಾಗಿದೆ ಹಾಗೂ ರಸ್ತೆ ಅವ್ಯವಸ್ಥೆಯಿಂದಾಗಿ ಪ್ರದೇಶದ ಜನರಿಗೆ ಸಂಚರಿಸಲಾಗದೆ ಒಂದು ರೀತಿಯ ದಿಗ್ಬಂಧನ ಹೇರಿದಂತಾಗಿದೆ ಎಂದು ಇಲ್ಲಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೊಳ್ಳಾಯಿಯಿಂದ ಕೋಮಾಲಿವರೆಗೆ ರಸ್ತೆಗೆ ಡಾಮರು ಹಾಕಲಾಗಿದೆ. ಕೋಮಾಲಿ ಪ್ರದೇಶದಲ್ಲಿ ರಸ್ತೆ ಬದಿಯಲ್ಲೇ ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿ ಚರಂಡಿ ನಿರ್ಮಿಸಿರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಕಳೆದ ಎಪ್ರಿಲ್ ತಿಂಗಳಲ್ಲಿ ರಸ್ತೆಗೆ ಮಣ್ಣು ಹಾಕಿ ಎತ್ತರಗೊಳಿಸಲಾಗಿತ್ತು. ಇದೀಗ ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣವಾಗಿ ಕೆಸರಿನ ಕೊಂಪೆಯಾಗಿ ಮಾರ್ಪಟ್ಟಿದೆ. ಪರಿಣಾಮ ವಾಹನ ಹಾಗೂ ಜನ ಸಂಚಾರ ಸಾಧ್ಯವಾಗದ ಸ್ಥಿತಿ ತಲುಪಿದೆ.
ರಸ್ತೆಗೆ ತಾಗಿಕೊಂಡೇ ನಿರ್ಮಾಣ ಮಾಡಿರುವ ಚರಂಡಿಯಲ್ಲಿ ಮಳೆಗಾಲದಲ್ಲಿ ನೀರು ತುಂಬಿ ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆಯ ಒಂದು ಪಾಶ್ರ್ವದಲ್ಲಿ ಮಳೆ ನೀರು ಹರಿಯಲು ಸಿಮೆಂಟ್ ಕೊಳವೆಯೊಂದನ್ನು ಅಳವಡಿಸಲಾಗಿದ್ದರೂ ಅದು ಚರಂಡಿಗಿಂತ ಎತ್ತರದಲ್ಲಿ ಇರುವುದರಿಂದ ಅದರಿಂದ ಪ್ರಯೋಜನ ಇಲ್ಲದಂತಾಗಿದೆ.
ಕೃಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ಪರಿಸರದಲ್ಲಿ ಸುಮಾರು ನೂರಕ್ಕೂ ಅಧಿಕ ವಾಸ್ತವ್ಯದ ಮನೆಗಳಿವೆ. ಕೋಮಾಲಿಯ ಮಧ್ಯ ಭಾಗದಲ್ಲಿ ರಸ್ತೆ ಹದಗೆಟ್ಟಿದ್ದರಿಂದ ಇಲ್ಲಿನ ನಾಗರಿಕರು ಅಗತ್ಯ ಕೆಲಸ-ಕಾರ್ಯಗಳಿಗೆ ಬೊಳ್ಳಾಯಿಗೆ ಬರಬೇಕಾದರೆ ಸುತ್ತು ಬಳಸಿ ಬರಬೇಕಾಗಿದೆ. ರಸ್ತೆ ದುರಸ್ತಿ ಪಡಿಸಿ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಅಲವತ್ತುಕೊಂಡರೆ, ಯಾವುದೇ ಸ್ಪಂದನೆ ಇಲ್ಲದಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ರಸ್ತೆ ಅವ್ಯವಸ್ಥೆಯಿಂದಾಗಿ ಯಾವುದೇ ವಾಹನ ಸವಾರರು ಈ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ. ಅಗತ್ಯ ವಸ್ತುಗಳಾದ ಅಡುಗೆ ಅನಿಲ ಸಿಲಿಂಡರ್ ಹೊತ್ತ ವಾಹನಗಳೂ ಈ ರಸ್ತೆಯಲ್ಲಿ ಬರಲಾಗುತ್ತಿಲ್ಲ. ತುರ್ತು ಕಾರ್ಯಗಳಿU ತೆರಳಲೂ ಕೂಡಾ ಈ ರಸ್ತೆಯಲ್ಲಿ ವಾಹನ ಸಂಚಾರ ನಡೆಸುವಂತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ನಾಗರಿಕರು. ಸ್ವಂತ ವಾಹನ ಇರುವವರೂ ಮನೆವರೆಗೆ ತಮ್ಮ ವಾಹನಗಳನ್ನು ಕೊಂಡು ಹೋಗಲಾಗದೆ ಅರ್ಧ ದಾರಿಯಲ್ಲಿ ನಿಲ್ಲಿಸಿ ಮನೆಗೆ ನಡೆದುಕೊಂಡೇ ತೆರಳಬೇಕಾದ ದುಸ್ಥಿತಿ ಇದೆ ಎಂಬ ಆಕ್ರೋಶ ಜನರದ್ದು.
ಕಾಮಗಾರಿ ನಡೆಸಲು ಅನುದಾನವಿಲ್ಲ ಎಂದು ಹೇಳುವ ಪಂಚಾಯತ್ ಅಧಿಕಾರಿಗಳು ಸಾರ್ವಜನಿಕರ ಆಕ್ರೋಶದ ಬಳಿಕ ಒಂದು ಲೋಡ್ ಕೆಂಪು ಕಲ್ಲು ತಂದು ಹಾಸಿ ಹೋಗಿದ್ದಾರೆ ಎನ್ನುವ ಸ್ಥಳೀಯರು ಕಲ್ಲು ಹಾಕಿದರೆ ರಸ್ತೆ ಅವ್ಯವಸ್ಥೆಗೆ ಕಾಯಕಲ್ಪ ಆಗುವುದಿಲ್ಲ. ಇಂತಹ ತೇಪೆ ಕಾಮಗಾರಿಗಳಿಂದ ಸಾರ್ವಜನಿಕರ ಹಣ ಮಾತ್ರ ಪೋಲಾಗುತ್ತದೆ. ಇಲ್ಲಿನ ಸಮಸ್ಯೆ ಪರಿಹಾರ ಆಗಬೇಕಾದರೆ ಕಾಂಕ್ರಿಟೀಕರಣ ನಡೆಸುವುದು ಮಾತ್ರ ಇರುವ ಏಕೈಕ ಪರಿಹಾರ ಎನ್ನುತ್ತಾರೆ. ತಕ್ಷಣ ಇಲ್ಲಿನ ರಸ್ತೆ ಸಮಸ್ಯೆಗೆ ಪರಿಹಾರ ಕಲ್ಪಿಸಿ ಪ್ರದೇಶದ ಜನರ ದಿಗ್ಬಂಧನಕ್ಕೆ ಕೊನೆ ಹಾಡದಿದ್ದರೆ, ಮುಂದಿನ ವಾರ ಪಂಚಾಯತ್ ಕಛೇರಿ ಮುಂದೆ ಧರಣಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.
0 comments:
Post a Comment