ಟೂರಿಸ್ಟ್ ಸ್ಪಾಟ್ ವೀಕ್ಷಿಸಲು ಬರುತ್ತಿದ್ದಾರೆ ಭಾರೀ ಸಂಖ್ಯೆಯ ಜನ
ಫೇಸ್ ಬುಕ್ ಕಮೆಂಟ್ ನಿಂದ ನೈಜತೆ ಸಾಬೀತು ಕಾರಣಕ್ಕೆ ಮಾಡಿದ ವೀಡಿಯೋ ವೈರಲ್
ಕಣ್ಣೂರು, ಸೆ. 10, 2020 (ಕರಾವಳಿ ಟೈಮ್ಸ್) : ಜಿಲ್ಲೆಯ ವಯನಾಡ್ ನಿವಾಸಿ ಪಿ ಜೆ ಬಿಜು (42) ಅವರು ಇತ್ತೀಚೆಗೆ ಮಾಹೆ ರೈಲ್ವೇ ನಿಲ್ದಾಣದ ಬಳಿ ಇರುವ ರಸ್ತೆಯ ಇಕ್ಕಟ್ಟಾದ ಸ್ಥಳದಲ್ಲಿ ಇನ್ನೊವಾ ಕಾರು ಪಾರ್ಕ್ ಮಾಡುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಸ್ಥಳ ಇದೀಗ ಪ್ರವಾಸಿಗರ ಆಕರ್ಷಣೆಯಾಗಿ ಪರಿವರ್ತನೆಗೊಂಡಿದೆ. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು, ಪ್ರವಾಸಿಗರು ಇಲ್ಲಿಗೆ ಆಗಮಿಸಿ ಕಾರು ಪಾರ್ಕ್ ಮಾಡಿದ ಜಾಗವನ್ನು ವೀಕ್ಷಣೆ ನಡೆಸಿ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜು, ಇದು ನನ್ನ ಪತ್ನಿ ಮಾಡಿರುವ ವಿಡಿಯೋ. ಈ ವೀಡಿಯೋ ಇಷ್ಟರ ಮಟ್ಟಿಗೆ ವೈರಲ್ ಆಗುತ್ತದೆ ಎಂದು ಸ್ವತಃ ಆಕೆಯೇ ಎಣಿಸಿರಲಿಲ್ಲ ಎಂದಿದ್ದಾರೆ.ಕೀ ಜಾಗದಲ್ಲಿ ಪಾರ್ಕ್ ಮಾಡಿದ ನಾಲ್ಕನೇ ಕಾರು ಇದಾಗಿದೆ. ಈ ಮೊದಲು ಮಾರುತಿ ಅಲ್ಟೋ, ನಂತರ ವ್ಯಾಗನ್ ಆರ್, ಜೀಪ್‍ಗಳನ್ನು ಕೂಡಾ ಈ ಜಾಗದಲ್ಲಿ ಪಾರ್ಕ್ ಮಾಡಿದ್ದರು. ಈ ಎಲ್ಲ ವಾಹನಗಳನ್ನು ಪಾರ್ಕ್ ಮಾಡಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಆದರೆ ಇದೀಗ ಇನ್ನೋವಾ ಕಾರು ಪಾರ್ಕ್ ಮಾಡಿರುವುದು ಮಾತ್ರ ವಿಶೇಷ ಗಮನ ಸೆಳೆದಿದೆ ಎಂದು ಬಿಜು ಹೇಳುತ್ತಾರೆ.
ಫೇಸ್ ಬುಕ್ ಕಮೆಂಟ್ ಕಾರಣದಿಂದ ವೀಡಿಯೋ ಅಪ್ಲೋಡ್ ಮಾಡಿದ ಪತ್ನಿ
ಈ ಜಾಗದಲ್ಲಿ ಬಿಜು ಕಾರು ಪಾರ್ಕ್ ಮಾಡಿದ ಚಿತ್ರವನ್ನು ಆರಂಭದಲ್ಲಿ ಫೇಸ್ ಬುಕ್ ಮುಖಪುಟದಲ್ಲಿ ಅಪ್ಲೋಡ್ ಮಾಡಿದಾಗ ಯಾರೊ ಒಬ್ಬರು ಎಡಿಟ್ ಮಾಡಿದ ಚಿತ್ರ ಎಂದು ಕಮೆಂಟ್ ಮಾಡಿದ್ದರಂತೆ. ಈ ಕಾರಣಕ್ಕೆ ಅನುಮಾನ ಪರಿಹರಿಸಲು ನೈಜತೆ ಸಾಬೀತು ಪಡಿಸಲು ಕಾರನ್ನು ಸಂಪೂರ್ಣವಾಗಿ ಪಾರ್ಕ್ ಮಾಡುತ್ತಿರುವ ವಿಡಿಯೋವನ್ನು ಪತ್ನಿ ಸೆರೆ ಹಿಡಿದು ತನ್ನ ಸ್ನೇಹಿತೆಗೆ ಕಳುಹಿಸಿದ್ದಾಳೆ. ಆಕೆ ಈ ವಿಡಿಯೋವನ್ನು ಫೇಸ್‍ಬುಕ್ ಮುಖಪುಟದಲ್ಲಿ ಅಪ್ಲೋಡ್ ಮಾಡಿದ್ದು, ಬಳಿಕ ಅದು ವೈರಲ್ ಆಗಿದೆ ಎಂದು ಬಿಜು ತಿಳಿಸಿದ್ದಾರೆ.
ಲಿಕ್ಕರ್ ಕಂಪೆನಿಯೊಂದರ ಉದ್ಯೋಗಿ ಕಂ ಚಾಲಕನಾಗಿರುವ ಬಿಜು ಅವರು ಕಳೆದ 12 ವರ್ಷಗಳಿಂದ ಮಾಹೆಯಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ. 1996ರಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದಿರುವ ಇವರು ಬಸ್ ಸೇರಿದಂತೆ ಹಲವು ವಾಹನಗಳನ್ನು ಚಲಾಯಿಸಿದ ಅನುಭವವನ್ನು ಹೊಂದಿದ್ದಾರೆ.
ಇಷ್ಟು ಸಣ್ಣ ಜಾಗದಲ್ಲಿ ಹೇಗೆ ಸುಲಭವಾಗಿ ಪಾರ್ಕ್ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ, ಇದು ಸಣ್ಣ ಜಾಗವೇ? ನಾನು ಎರ್ನಾಕುಲಂ ಮತ್ತು ಕಣ್ಣೂರು ಮಧ್ಯೆ ಹಲವು ವರ್ಷಗಳ ಕಾಲ ಬಸ್ ಓಡಿಸಿದ್ದೇನೆ. ಈ ಬಸ್ಸು 12 ಮೀಟರ್ ಉದ್ದವನ್ನು ಹೊಂದಿತ್ತು. ಹೀಗಿರುವಾಗ ಇನ್ನೋವಾದ ಗಾತ್ರ ಬಸ್ಸಿಗೆ ಹೋಲಿಸಿದರೆ ಬಹಳ ಚಿಕ್ಕದು. ಯಾವುದೇ ಕಾರಿನ ಗಾತ್ರವನ್ನು ಮನಸ್ಸಿನಲ್ಲೇ ಯೋಚಿಸಿಕೊಂಡು ಆತ್ಮವಿಶ್ವಾಸದಿಂದ ಪಾರ್ಕ್ ಮಾಡಿದರೆ ಇದು ಕಷ್ಟದ ಕೆಲಸವಲ್ಲ ಎಂದು ಉತ್ತರಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಹಲವು ವರದಿಗಾರರು ನನಗೆ ಕರೆ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಇದು ದೊಡ್ಡ ವಿಷಯವೇ ಇಲ್ಲ. ಯಾರೇ ಉತ್ತಮ ಚಾಲಕ ನಾನು ಪಾರ್ಕ್ ಮಾಡಿದಂತೆ ಮಾಡಬಹುದು ಎಂದು ಹೇಳಿದ್ದಾರೆ. ಆದರೂ ಬಿಜು ಅವರ ಪಾರ್ಕಿಂಗ್ ಕೌಶಲ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಿರಿದಾದ ಜಾಗದಲ್ಲಿ ಇಷ್ಟು ದೊಡ್ಡ ಕಾರನ್ನು ಯಾರ ಸಹಾಯ ಇಲ್ಲದೇ, ಬೇರೆ ವಾಹನಗಳಿಗೂ ತೊಂದರೆ ನೀಡದೇ ಚಲಾವಣೆ ಮಾಡಿದ್ದು, ಆತನ ಡ್ರೈವಿಂಗ್ ಜಾಣ್ಮೆಗೆ ಹಿಡಿದ ಕೈಗನ್ನಡಿಯಾಗಿದೆ. ಇದು ನಿಜಕ್ಕೂ ಅದ್ಭುತ ಎಂಬ ಕಮೆಂಟುಗಳು ಹರಿದು ಬರುತ್ತಿದೆ.
0 comments:
Post a Comment