ಅಕ್ಟೋಬರ್ 2 ರಂದು ಹಮ್ಮಿಕೊಂಡಿರುವ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮುಂದೂಡಲು ಕರ್ನಾಟಕ ಪಶು ವೈದ್ಯಕೀಯ ಸಂಘ ಮನವಿ - Karavali Times ಅಕ್ಟೋಬರ್ 2 ರಂದು ಹಮ್ಮಿಕೊಂಡಿರುವ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮುಂದೂಡಲು ಕರ್ನಾಟಕ ಪಶು ವೈದ್ಯಕೀಯ ಸಂಘ ಮನವಿ - Karavali Times

728x90

30 September 2020

ಅಕ್ಟೋಬರ್ 2 ರಂದು ಹಮ್ಮಿಕೊಂಡಿರುವ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮುಂದೂಡಲು ಕರ್ನಾಟಕ ಪಶು ವೈದ್ಯಕೀಯ ಸಂಘ ಮನವಿ



ಬೆಂಗಳೂರು, ಸೆ. 30, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ಚರ್ಮಗಂಟು ರೋಗ (ಎಲ್.ಎಸ್.ಡಿ) ವ್ಯಾಪಕವಾಗಿ ಹರಡಿರುವುದರಿಂದ ಹಾಗೂ ತಜ್ಞರ ಅಭಿಪ್ರಾಯದಂತೆ ರೋಗ ಕಾಣಿಸಿಕೊಂಡ 5 ಕಿ.ಮೀ ಸುತ್ತಮುತ್ತ ಎಲ್.ಎಸ್.ಡಿ. ಲಸಿಕೆ ಹಾಕಬೇಕಾಗಿದೆ. ಈ ಚರ್ಮಗಂಟು ರೋಗ ವೈರಾಣು ಕಾಯಿಲೆಯಾಗಿದ್ದು, ಕಾಲುಬಾಯಿ ಜ್ವರದ ಲಸಿಕೆ ಹಾಕುವುದರಿಂದ ಜಾನುವಾರುಗಳಿಗೆ ಅಡ್ಡಪರಿಣಾಮ ಉಂಟಾಗುತ್ತದೆ. ಅಲ್ಲದೆ, ಈ ಕಾಯಿಲೆಗೆ ಚಿಕಿತ್ಸೆ ನೀಡಲು ತೆರಳುವ ಪಶು ವೈದ್ಯರು ಹಾಗೂ ಸಿಬ್ಬಂದಿಗಳು ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ತೆರಳಿದ್ದಲ್ಲಿ ಕಾಯಿಲೆಯು ಹೆಚ್ಚಾಗುವ ಸಂಭವಿರುವುದರಿಂದ ಅಕ್ಟೋಬರ್ 2 ರಂದು ಹಮ್ಮಿಕೊಂಡಿರುವ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಮುಂದೂಡಿ ಎಂದು ಕರ್ನಾಟಕ ಪಶುವೈದ್ಯಕೀಯ ಸಂಘ ಸರಕಾರಕ್ಕೆ ಮನವಿ ಮಾಡಿದೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ಸಂಘದ ಅಧ್ಯಕ್ಷ ಡಾ ಎಸ್ ಸಿ ಸುರೇಶ್, ಈಗಾಗಲೇ ಟ್ಯಾಗಿಂಗ್ ಸಂಧರ್ಭದಲ್ಲಿ ಗ್ರಾಮಸ್ಥರು ಅಸಹಕಾರ ಹಾಗೂ ಕೆಲವೆಡೆ ಬಹಿಷ್ಕಾರ ಮಾಡಿರುವ ಪ್ರಕರಣಗಳು ಹೆಚ್ಚಾಗಿವೆ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಕೋವಿಡ್-19 ಕಾಯಿಲೆಯೂ ಹರಡಿರುವುದರಿಂದ ಲಸಿಕಾ ಕಾರ್ಯಕ್ರಮಕ್ಕೆ ರೈತರು ಸಹಕಾರ ನೀಡುವುದು ಕಷ್ಟವಾಗಿರುತ್ತದೆ. ಸೆಪ್ಟೆಂಬರ್ 23 ರಂದು ಇಲಾಖೆಯ ನಿರ್ದೇಶಕರ ನೇತೃತ್ವದಲ್ಲಿ ನಡೆದ ಸಭೆಯಲ್ಲೂ ಕೂಡಾ ರಾಜ್ಯದ ಎಲ್ಲಾ ಜಿಲ್ಲೆಗಳ ಇಲಾಖೆಯ ಉಪನಿರ್ದೇಶಕರಗಳೂ ಕೂಡಾ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ 2 ತಿಂಗಳ ಅವಧಿಗೆ ಮುಂದೂಡುವಂತೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. 

ಸಂಘದ ಪ್ರಧಾನ ಕಾರ್ಯದರ್ಶಿ ಡಾ ಶಿವರಾಮ್ ಎ.ಡಿ. ಅವರು, ಕರ್ನಾಟಕ ಪಶು ವೈದ್ಯಕೀಯ ಸಂಘವು ಸೆಪ್ಟೆಂಬರ್ 27 ರಂದು ಗೂಗಲ್ ಮೀಟ್ ಮೂಲಕ ನಡೆಸಿದ ತುರ್ತು ಕಾರ್ಯಕಾರಿ ಸಮಿತಿಯಲ್ಲಿ ಹಾಜರಿದ್ದ 30 ಜಿಲ್ಲೆಗಳ ಪ್ರತಿನಿಧಿಗಳು, ಮೊದಲು ಚರ್ಮಗಂಟು (ಎಲ್.ಎಸ್.ಡಿ) ನಿಯಂತ್ರಣಕ್ಕೆ ಬರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರೋಗ ನಿಯಂತ್ರಣಕ್ಕೆ ಬಂದ ನಂತರ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದೆಂದು ಒಕ್ಕೊರಳಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾರ್ಚ್ 2020 ರಲ್ಲಿ ಹಮ್ಮಿಕೊಳ್ಳಬೇಕಾಗಿದ್ದ ಲಸಿಕಾ ಕಾರ್ಯಕ್ರಮವನ್ನು ಲಸಿಕೆ ಸರಬರಾಜು ಮತ್ತು ಟ್ಯಾಗ್‍ಗಳನ್ನು ಸಕಾಲದಲ್ಲಿ ಪೂರೈಸದ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದೆ. ಈ ಹಂತದಲ್ಲಿ ಜಾನುವಾರುಗಳು ಚರ್ಮಗಂಟು ರೋಗದಿಂದ ಬಳಲುತ್ತಿವೆ. ಹಾಗೇಯೇ ಕೋವಿಡ್-19 3ನೇ ಹಂತ ತಲುಪಿರುವುದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಒತ್ತಡದಲ್ಲಿದ್ದಾರೆ. ಚರ್ಮಗಂಟು ರೋಗವು ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ವಿಚಾರವಾಗಿ ವಿಜ್ಞಾನಿಗಳ ಜೊತೆ ಸಂಘವು ಚರ್ಚಿಸಿದಾಗ ಚರ್ಮಗಂಟು ರೋಗವು ಸಹ ವೈರಾಣುವಿನಿಂದ ಉತ್ಪತ್ತಿಯಾಗಿದೆ. ಈಗ ನೀಡಬೇಕಾಗಿರುವ ಕಾಲುಬಾಯಿ ಜ್ವರದ ಲಸಿಕೆಯೂ ಸಹ ವೈರಾಣುವಿನಿಂದಲೇ ತಯಾರು ಮಾಡಲಾಗಿದ್ದು, ಲಸಿಕೆ ಮಾಡಿದ ನಂತರ ದೇಹದಲ್ಲಿ ವ್ಯಾಕ್ಸಿನೇಷನ್ ಸ್ಟ್ರೆಸ್ ಉಂಟಾಗುತ್ತದೆ. ಈಗಾಗಲೇ ಚರ್ಮಗಂಟು ರೋಗದ ವೈರಾಣು ದೇಹದಲ್ಲಿದ್ದು, ಒಟ್ಟಿಗೆ ಸೇರಿ ಜಾನುವಾರುಗಳಲ್ಲಿ ರೋಗಗಳನ್ನು ಉಲ್ಭಣಗೊಳಿಸುತ್ತದೆ. ಇದರಿಂದಾಗಿ ರಾಸುಗಳು ಬಹಳ ಬೇಗ ಮರಣ ಹೊಂದುವ ಸಾಧ್ಯತೆ ಇದೆ. ನಾವು ರೋಗಗಳಿಂದ ರಕ್ಷಿಸಲು ನೀಡುತ್ತಿರುವ ಲಸಿಕೆಯೇ ರೈತರಿಗೆ ಮಾರಣಾಂತಿಕವಾಗಬಹುದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. 

ಪಶುವೈದ್ಯರು ರೈತರಿಗೆ ತುರ್ತು ಚಿಕಿತ್ಸೆ ಉಳಿದ ಸೇವೆಗಳನ್ನು ಸದಾ ನೀಡುತ್ತಲೇ ಬಂದಿದ್ದಾರೆ. ಲಸಿಕೆ ಮಾಡಲು ಕಟಿಬದ್ದರಾಗಿದ್ದೇವೆ. ಇಂತಹ ದುಸ್ತರ ಪರಿಸ್ಥಿತಿಯನ್ನು ಪರಿಗಣಿಸಿ, ಚರ್ಮಗಂಟು ರೋಗ (ಎಲ್.ಎಸ್.ಡಿ) ಖಾಯಿಲೆಯನ್ನು ನಿಯಂತ್ರಿಸಲು ಕನಿಷ್ಠ 2 ತಿಂಗಳ ಕಾಲಾವಕಾಶ ಬೇಕಾಗಿದೆ. ಈ ಕಾಯಿಲೆಯು ಹತೋಟಿಗೆ ಬಂದ ನಂತರ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲು ಸಮಸ್ತ ಪಶು ವೈದ್ಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಲಸಿಕಾ ಕಾರ್ಯಕ್ರಮವನ್ನು 2 ತಿಂಗಳ ಅವಧಿಗೆ ಮುಂದೂಡಲು ಸಂಘವು ಮನವಿ ಮಾಡಿದೆ. ಒಂದು ವೇಳೆ ಸರಕಾರವು ಸಂಘದ ಮನವಿಯನ್ನು ಪರಿಗಣಿಸದೇ ನಿಗದಿಪಡಿಸಿದ ದಿನದಂದೇ ಲಸಿಕಾ ಕಾರ್ಯಕ್ರಮ ಕೈಗೊಂಡರೆ ರಾಜ್ಯದ ಯಾವುದೇ ಪಶುವೈದ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಂಘ ಸ್ಪಷ್ಟಪಡಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಡಾ. ಶಿವರಾಮ್ ಎ.ಡಿ., ಪ್ರಧಾನ ಕಾರ್ಯದರ್ಶಿಗಳು, ಮೊಬೈಲ್ ಸಂಖ್ಯೆ 918679198ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ. 











  • Blogger Comments
  • Facebook Comments

0 comments:

Post a Comment

Item Reviewed: ಅಕ್ಟೋಬರ್ 2 ರಂದು ಹಮ್ಮಿಕೊಂಡಿರುವ ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಮುಂದೂಡಲು ಕರ್ನಾಟಕ ಪಶು ವೈದ್ಯಕೀಯ ಸಂಘ ಮನವಿ Rating: 5 Reviewed By: karavali Times
Scroll to Top