ಅಧಿಕಾರಸ್ಥರಿಂದ ಮಾಧ್ಯಮ ರಂಗವನ್ನು ರಕ್ಷಿಸಿ : ಮಂಗಳೂರು ನಗರ ಪೊಲೀಸ್ ಕಮಿಷನರ್ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ
ಮಂಗಳೂರು, ಸೆ. 30, 2020 (ಕರಾವಳಿ ಟೈಮ್ಸ್) : ರಾಜ್ಯಮಟ್ಟದ ಕನ್ನಡ ನ್ಯೂಸ್ ಚಾನೆಲ್ ಪವರ್ ಟಿವಿ ಕಛೇರಿಯ ಮೇಲೆ ರಾಜ್ಯ ಸರಕಾರದ ಅಧೀನದಲ್ಲಿರುವ ಸಿಸಿಬಿ ಪೊಲೀಸರ ತಂಡವೊಂದು ದಾಳಿ ನಡೆಸಿ ಸುದ್ದಿ ವಾಹಿನಿಯ ನೇರ ಪ್ರಸಾರ ಸ್ಥಗಿತಗೊಳಿಸುವ ಕ್ರಮವನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಿ ಮಾಧ್ಯಮ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕು ಹಾಗೂ ಅಧಿಕಾರಸ್ಥರಿಂದ ಮಾಧ್ಯಮ ರಂಗವನ್ನು ರಕ್ಷಿಸಿ ಎಂದು ಸಂಘದ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಅವರ ಮೂಲಕ ರಾಜ್ಯ ಗೃಹ ಸಚಿವರಿಗೆ ಲಿಖಿತ ಮನವಿ ಸಲ್ಲಿಸಿ ಆಗ್ರಹಿಸಿದೆ.
ಬುಧವಾರ ಸಂಜೆ ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಕೆಜೆಯು ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ನೇತೃತ್ವದ ನಿಯೋಗ ನೆಲದ ಕಾನೂನು ರೀತ್ಯಾ ಕ್ರಮ ಕೈಗೊಳ್ಳದ ಪೊಲೀಸರು ದುರುದ್ದೇಶದಿಂದ ವಾಹಿನಿಯ ಕಛೇರಿಯ ಮೇಲೆ ದಾಳಿ ನಡೆಸಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸುದ್ದಿ ಸಂಸ್ಥೆಯ ಮೇಲೆ ದೌರ್ಜನ್ಯ ನಡೆಸಿರುವು ಅತ್ಯಂತ ಕಳವಳಕಾರಿ ಎಂದು ಅಭಿಪ್ರಾಯಪಟ್ಟಿದೆ.
ಜನ ಸಾಮಾನ್ಯರ ಧ್ವನಿಯಾಗಿರುವ ಮಾಧ್ಯಮ ರಂಗದ ಮೇಲೆ ಇತ್ತೀಚೆಗಿನ ದಿನಗಳಲ್ಲಿ ವ್ಯವಸ್ಥಿತ ದಾಳಿಗಳು ಹೆಚ್ಚಾಗುತ್ತಿದ್ದು, ಪ್ರಜಾಪ್ರಭುತ್ವಕ್ಕೆ ಅಪಾಯ ಉಂಟು ಮಾಡುತ್ತಿರುವ ಸೂಚಕವೆಂದೇ ಪರಿಗಣಿಸಬೇಕಾಗಿದೆ. ಇದು ಅಪಾಯಕಾರಿಯೂ ಹೌದು. ಕಾನೂನನ್ನು ಮೀರಿ, ಅಧಿಕಾರ ಹಾಗೂ ಆಡಳಿತ ವ್ಯವಸ್ಥೆಯನ್ನು ತೆರೆಮರೆಯಲ್ಲಿ ದುರುಪಯೋಗಪಡಿಸಿಕೊಂಡು ಜನರ ಧ್ವನಿಯಾಗಿರುವ ಮಾಧ್ಯಮ ಸಂಸ್ಥೆಗಳ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯವನ್ನು ಹಾಗೂ ಇದಕ್ಕೆ ಕಾರಣರಾದ ಅಧಿಕಾರಿಗಳ ನಡೆಯನ್ನು ನಮ್ಮ ಸಂಘವು ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸುತ್ತದೆ ಹಾಗೂ ವಿರೋಧಿಸುತ್ತದೆ ಎಂದು ನಿಯೋಗ ಮನವಿಯಲ್ಲಿ ಹೇಳಿಕೊಂಡಿದೆ.
ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿಗಳ ಬಗ್ಗೆ ಆಕ್ಷೇಪಗಳಿದ್ದರೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವ ಅವಕಾಶಗಳಿದ್ದರೂ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡಿರುವುದು ಇಲ್ಲಿ ಕಂಡುಬರುತ್ತಿರುವ ನಗ್ನ ಸತ್ಯ. ಇಲ್ಲಿ ಯಾರೂ ಪರಿಪೂರ್ಣರಲ್ಲ. ತಪ್ಪು-ಒಪ್ಪುಗಳ ಬಗ್ಗೆ ತೀರ್ಮಾನಿಸಲು ಕಾನೂನು ವ್ಯವಸ್ಥೆಗಳಿವೆ, ನ್ಯಾಯಾಲಯಗಳಿವೆ, ಅಲ್ಲಿನ ತೀರ್ಮಾನಗಳಿಗೆ ಬದ್ದರಾಗಬೇಕಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿರುವ ಕೆಜೆಯು ನಿಯೋಗ ಸುದ್ದಿ ವಾಹಿನಿಯ ಮೇಲೆ ನಡೆದ ದೌರ್ಜನ್ಯಕ್ಕೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಜರುಗಿಸುವ ಮೂಲಕ ಅಧಿಕಾರ ದುರುಪಯೋಗವನ್ನು ತಡೆಯುವಂತೆ ಗೃಹ ಸಚಿವರಿಗೆ ಆಗ್ರಹಿಸಿದೆ.
ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಪದಾಧಿಕಾರಿಗಳಾದ ದತ್ತಾತ್ರೇಯ ಹೆಗಡೆ, ಇಜಾಝ್ ಬಡ್ಡೂರು, ಲತೀಫ್ ನೇರಳಕಟ್ಟೆ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಸದಾನಂದ ಸುವರ್ಣ, ಯು ಮಸ್ತಫಾ, ಬಾಲಕೃಷ್ಣ ಕಲ್ಲಡ್ಕ ಮೊದಲಾದವರು ಇದ್ದರು.
0 comments:
Post a Comment