ನವದೆಹಲಿ (ಕರಾವಳಿ ಟೈಮ್ಸ್) : ಕೋವಿಡ್-19 ವೈರಸ್ ಕಾರಣಕ್ಕಾಗಿ ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಬಿಜೆಪಿಯೇತರ ಪಕ್ಷಗಳ ಆರು ರಾಜ್ಯಗಳ ನಾಯಕರು ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಬಾಕಿ ಉಳಿದ ಜೆಇಇ ಪರೀಕ್ಷೆಗಳು ಸೆಪ್ಟೆಂಬರ್ 5 ಮತ್ತು 6 ರಂದು ನಿಗದಿಯಂತೆ ನಡೆಯಲಿದ್ದು, ಸೆಪ್ಟೆಂಬರ್ 13 ರಂದು ನೀಟ್ ನಡೆಸಲಾಗುವುದು. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ.ಆರ್. ಗವಾಯಿ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ನ್ಯಾಯಪೀಠವು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಈ ಹಿಂದೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ಸೆಪ್ಟೆಂಬರ್‍ನಲ್ಲಿ ನಿಗದಿಯಾಗಿದ್ದ ರಾಷ್ಟ್ರೀಯ ಅರ್ಹತೆ ಕಂ ಪ್ರವೇಶ ಪರೀಕ್ಷೆ (ನೀಟ್)ಯನ್ನು ಮುಂದೂಡುವಂತೆ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 17 ರಂದು ವಜಾಗೊಳಿಸಿತ್ತು. ಆರು ರಾಜ್ಯಗಳಾದ ಬಂಗಾಳ, ಜಾರ್ಖಂಡ್, ರಾಜಸ್ಥಾನ, ಛತ್ತೀಸ್‍ಘಡ್, ಪಂಜಾಬ್ ಹಾಗೂ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ ತೀರ್ಪು ಮರು ಪರಿಶೀಲನೆ ನಡೆಸಬೇಕೆಂದು ಅರ್ಜಿ ಸಲ್ಲಿಸಿದ್ದರು.
ಇದೀಗ ನಾಯಕರ ಕೋರಿಕೆಯನ್ನು ಸುಪ್ರೀ ಕೋರ್ಟ್ ಮಾನ್ಯ ಮಾಡದೆ ಇದ್ದು, ಪರಿಣಾಮ ಜೆಇಇ ಹಾಗೂ ನೀಟ್ ಪರೀಕ್ಷೆಗಳು ನಿಗದಿತ ದಿನಾಂಕಗಳಂದೇ ನಡೆಯಲಿದೆ.
0 comments:
Post a Comment