ಕೊರೋನಾ ಆತಂಕ ನಡುವೆ ಈ ಬಾರಿಯ ಐಪಿಎಲ್ ಗೆ ಶನಿವಾರ ದುಬೈಯಲ್ಲಿ ಚಾಲನೆ
ಅಬುಧಾಬಿ, ಸೆ. 20, 2020 (ಕರಾವಳಿ ಟೈಮ್ಸ್) : ಇಲ್ಲಿನ ಶೇಖ್ ಝಾಯೇದ್ ಕ್ರೀಡಾಂಗಣದಲ್ಲಿ ಶನಿವಾರ ಶುಭಾರಂಭಗೊಂಡ ಐಪಿಎಲ್-2020 ಟಿ-20 ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸುವ ಮೂಲಕ ಕಳರದ ಬಾರಿಯ ಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಂಡ ಎಂ.ಎಸ್. ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿನ ಖಾತೆ ತೆರೆದಿದೆ.
ಉದ್ಘಾಟನಾ ಪಂದ್ಯದಲ್ಲೇ ಟಾಸ್ ಜಯಿಸಿದ ಸಿ.ಎಸ್.ಕೆ. ನಾಯಕ ಧೋನಿ ಮೊದಲು ಬ್ಯಾಟಿಂಗ್ ಅವಕಾಶ ಎದುರಾಳಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಟ್ಟರಾದರೂ ತನ್ನ ತೀರ್ಮಾನದಲ್ಲಿ ಯಶಸ್ಸು ಗಳಿಸಿಕೊಂಡರು.
ಟಾಸ್ ಸೋತು ಮೊದಲು ದಾಂಡುಗಾರಿಕೆ ನಡೆಸುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಒವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಮುಂಬೈ ಇಂಡಿಯನ್ಸ್ ಪರ ಸೌರಭ್ ತಿವಾರಿ 42, ಕ್ವಿಂಟನ್ ಡಿ ಕಾಕ್ 33, ಕೀರನ್ ಪೊಲಾರ್ಡ್ 18 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಬೌಲರ್ ಗಳಾದ ಲುಂಗಿ ಎನ್ಗಿಡಿ 4 ಓವರ್ ಗಳಲ್ಲಿ 38 ರನ್ ಗಳಿಗೆ 3 ವಿಕೆಟ್ ಪಡೆದರೆ, ದೀಪಕ್ ಚಹರ್, 4 ಓವರ್ ಗಳಲ್ಲಿ 32 ರನ್ ಗಳಿಗೆ 2 ವಿಕೆಟ್ ಹಾಗೂ ರವೀಂದ್ರ ಜಡೇಜಾ 4 ಓವರ್ ಗಳಲ್ಲಿ 42 ರನ್ ನೀಡಿ 2 ವಿಕೆಟ್ ಪಡೆದುಕೊಂಡರು.
ಮುಂಬೈ ಇಂಡಿಯನ್ಸ್ ನೀಡಿದ 162 ರನ್ ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸುವ ಮೂಲಕ ಗೆಲುವು ಸಾಧಿಸಿತು. ಅಂಟಿ ರಾಯುಡು 71 ರನ್ (48 ಎಸೆತ, 6 ಬೌಂಡರಿ, 3 ಸಿಕ್ಸರ್ ) ಭಾರಿಸಿದರೆ, ಡುಪ್ಲೆಸಿಸ್ ಔಟಾಗದೇ 58 ರನ್ (44 ಎಸೆತ, 6 ಬೌಂಡರಿ), ರವೀಂದ್ರ ಜಡೇಜಾ 10 ರನ್, ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಯಾಮ್ ಕರ್ರನ್ 6 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಒಳಗೊಂಡ ಭರ್ಜರಿ 28 ರನ್ ಭಾರಿಸಿದರು. ನಾಯಕ ಎಂ.ಎಸ್. ಧೋನಿ 2 ಎಸೆತ ಎದುರಿಸಿದರೂ ಯಾವುದೇ ರನ್ ಗಳಿಸಲಿಲ್ಲ.
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ ಹಾಗೂ ಜೇಮ್ಸ್ ಪ್ಯಾಟಿನ್ಸನ್ ಹಾಗೂ ರಾಹುಲ್ ಚಹರ್ ತಲಾ ಒಂದೊಂದು ವಿಕೆಟ್ ಗಳನ್ನು ಪಡೆದುಕೊಂಡರು.
ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ಅಂಬಾಟಿ ರಾಯುಡು ಮತ್ತು ಡುಪ್ಲೆಸಿಸ್ ಶತಕದ ಜೊತೆಯಾಟ (115 ರನ್) ಚೆನ್ನೈ ತಂಡದ ವಿಜಯಕ್ಕೆ ಕಾರಣವಾಯಿತು.
ಅಂಬಟಿ ರಾಯುಡು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
0 comments:
Post a Comment