ಐಪಿಎಲ್ ಇತಿಹಾಸದಲ್ಲೇ ಬೃಹತ್ ಮೊತ್ತ ಚೇಸ್ ಮಾಡಿ ದಾಖಲೆ ನಿರ್ಮಿಸಿದ ರಾಜಸ್ಥಾನ್ ರಾಯಲ್ಸ್
ಶಾರ್ಜಾ, ಸೆ. 27, 2020 (ಕರಾವಳಿ ಟೈಮ್ಸ್) : ಇಲ್ಲಿನ ರಾಷ್ಟ್ರೀಯ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್ 16 ನೇ ಆವೃತ್ತಿಯ 9ನೇ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಹಾಗೂ ಸಂಜು ಸ್ಯಾಮ್ಸನ್ ಅವರ ಸಿಡಿಲಬ್ಬರದ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಮೂರು ಎಸೆತಗಳು ಬಾಕಿ ಉಳಿದಿರುವಂತೆಯೇ 4 ವಿಕೆಟ್‍ಗಳಿಂದ ರೋಮಾಂಚಕವಾಗಿ ಸೋಲಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ದೊಡ್ಡ ಮೊತ್ತ ಚೇಸ್ ಮಾಡಿದ ಕೀರ್ತಿಗೆ ರಾಜಸ್ಥಾನ್ ತಂಡ ಪಾತ್ರವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ಶತಕ ಹಾಗೂ ತಂಡದ ನಾಯಕ ಕೆ.ಎಲ್. ರಾಹುಲ್ ಅವರ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 223 ರನ್ ಗಳ ಬೃಹತ್ ಮೊತ್ತ ಪೇರಿಸಿತು. 224 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ತಂಡ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ 3 ಎಸೆತ ಇರುವಂತೆಯೇ ಗುರಿ ತಲುಪಿತು.
ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 16ನೇ ಓವರಿನಲ್ಲಿ ಔಟ್ ಆದರು. ಈ ವೇಳೆ ಪಂದ್ಯ ರಾಜಸ್ಥಾನ್ ರಾಯಲ್ಸ್ ತಂಡದ ಕೈ ಜಾರುವ ಹಂತದಲ್ಲಿತ್ತು. ಈ ಸಂದರ್ಭ ಸ್ಫೋಟಕ ಆಟಕ್ಕಿಳಿದ ತೆವಾಟಿಯಾ 17ನೇ ಓವರಿನಲ್ಲಿ ಪಂದ್ಯದ ಗತಿಯನ್ನೇ ಬದಲಿಸಿ ಹಾಕಿದರು. ಶೆಲ್ಡನ್ ಕಾಟ್ರೆಲ್ ಎಸೆದ ಈ ಓವರಿನಲ್ಲಿ ಸತತ ನಾಲ್ಕು ಸಿಕ್ಸರ್ ಸಹಿತ ಒಂದೇ ಓವರಿನಲ್ಲಿ ಒಟ್ಟು ಐದು ಸಿಕ್ಸರ್ ಸಿಡಿಸಿ ಪಂದ್ಯ ಬಹುತೇಕ ರಾಜಸ್ಥಾನ್ ಕಡೆ ವಾಲುವಂತೆ ಮಾಡಿದರು. ಬಳಿಕ ಸ್ಯಾಮ್ಸನ್ ಜಾಗಕ್ಕೆ ಬಂದ ಜೋಫ್ರಾ ಆರ್ಚರ್ ಅವರು ಸತತ ಎರಡು ಸಿಕ್ಸರ್ ಸಿಡಿಸಿ ರಾಯಲ್ಸ್ ಗೆಲುವು ಸುಲಭವಾಗುವಂತೆ ಮಾಡಿದರು.
ಮೊದಲ 23 ಎಸೆತದಲ್ಲಿ 17 ರನ್ ಗಳಿಸಿ ಟೀಕೆಗೆ ಗುರಿಯಾಗಿದ್ದ ತೆವಾಟಿಯಾ ಬಳಿಕದ 8 ಎಸೆತದಲ್ಲಿ 36 ರನ್ ಸಿಡಿಸಿ ಎಲ್ಲರ ಬಾಯಿ ಮುಚ್ಚುವಂತೆ ಮಾಡಿದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಚೇಸ್ ಮಾಡಿದ ತಂಡ ಎಂಬ ಹೆಗ್ಗಳಿಕಗೆ ರಾಜಸ್ಥಾನ ರಾಯಲ್ಸ್ ಪಾತ್ರವಾಯಿತು.
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಿದರು. ಪರಿಣಾಮ ರಾಜಸ್ಥಾನ್ ತಂಡ ಕೇವಲ 4.3 ಓವರಿನಲ್ಲೇ ಅರ್ಧಶತಕ ದಾಟಿತು. ಜೊತೆಗೆ ಸ್ಮಿತ್ ಅವರ ಭರ್ಜರಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳ ಸಹಾಯದಿಂದ ಪವರ್ ಪ್ಲೇ ಮುಕ್ತಾಯದ ವೇಳೆಗೆ ಬರೋಬ್ಬರಿ 69 ರನ್ ಕಲೆಹಾಕಿತು.
ನಂತರ ಭರ್ಜರಿ ಬ್ಯಾಟಿಂಗ್ ಮಾಡಿದ ಸ್ಮಿತ್ ಮತ್ತು ಸಂಜು ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದರು. ಈ ಮೂಲಕ ಕೇವಲ 8.5 ಓವರಿನಲ್ಲಿ ರಾಜಸ್ಥಾನ್ ತಂಡ 100ರ ಗಡಿ ದಾಟಿತು. ಆದರೆ 27 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸ್ಮಿತ್ ಅವರು 8ನೇ ಓವರಿನ ಕೊನೆಯ ಬಾಲಿನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತನ್ನ ಅಬ್ಬರವನ್ನು ಮುಂದುವರಿಸಿದ ಸಂಜು ಸ್ಯಾಮ್ಸನ್ ಮಿಂಚಿನ ಅರ್ಧಶತಕ ಸಿಡಿಸಿ ಮಿಂಚಿದರು. 16ನೇ ಓವರಿನ ಮೊದಲ ಬಾಲಿನಲ್ಲಿ 42 ಎಸೆತಗಳಿಗೆ 85 ರನ್ ಸಿಡಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಶಮಿ ಬೌಲಿಂಗ್ ನಲ್ಲಿ ವಿಕೆಟ್ ಹಿಂದುಗಡೆ ಕ್ಯಾಚ್ ನೀಡಿ ಔಟಾದರು.
0 comments:
Post a Comment