ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತ ಅನುಭವಿಸಿದ ರಾಯಲ್ಸ್
ದುಬೈ, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ದುಬೈನಲ್ಲಿ ನಡೆಯುತ್ತಿರುವ 13ನೇ ಆವೃತ್ತಿಯ ಐಪಿಎಲ್ ಕ್ರೀಡಾಕೂಟದ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ 37 ರನ್‍ಗಳಿಂದ ಜಯ ಗಳಿಸಿದೆ. ಈ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಟೂರ್ನಿಯಲ್ಲಿ ಮೊದಲ ಸೋಲಿನ ಆಘಾತ ಅನುಭವಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೊಲ್ಕತ್ತಾ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತ್ತು. ಕೊಲ್ಕತ್ತಾ ಪರ ಶುಭಮ್ ಗಿಲ್ (47), ಇಯಾನ್ ಮಾರ್ಗನ್ (34), ಆಂಡ್ರೆ ರಸ್ಸೈಲ್ (24) ಹಾಗೂ ನಿತೀಶ್ ರಾಣ (22) ರನ್‍ಗಳ ಕೊಡುಗೆ ನೀಡಿದರು. ಗೆಲ್ಲಲು 175 ರನ್‍ಗಳ ಗುರಿ ಪಡೆದ ರಾಜಸ್ಥಾನ ತಂಡದ ಪರ ತಾಮ್ ಕುರ್ರನ್ ಕೊನೆವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿ ಅಜೇಯ ಅರ್ಧ ಶತಕ (54 ರನ್, 36 ಎಸೆತ, 3 ಸಿಕ್ಸರ್, 2 ಬೌಂಡರಿ) ಸಿಡಿಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಿಲ್ಲ. ಅಂತಿಮವಾಗಿ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಗಿ 37 ಗಳಿಂದ ಕೆಕೆಆರ್‍ಗೆ ಶರಣಾಯಿತು.
ಕೋಲ್ಕತ್ತಾ ತಂಡದ ಶಿಸ್ತಿನ ದಾಳಿಗೆ ತಲೆಬಾಗಿದ ರಾಜಸ್ಥಾನ ರಾಯಲ್ಸ್ ತಂಡದ ಬಹುತೇಕ ದಾಂಡಿಗರು ಒಂದಂಕಿಗೇ ತಮ್ಮ ಪ್ರದರ್ಶನ ಸೀಮಿತಗೊಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ಅಲ್ಪ ಮೊತ್ತದ ಗುರಿ ನೀಡಿದರೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಪಂದ್ಯವನ್ನು ತನ್ನದಾಗಿಸಿಕೊಂಡಿದೆ.
ಕೋಲ್ಕತ್ತಾ ಪರವಾಗಿ ದಾಳಿಗಾರರಾದ ಶಿವಂ ಮಾವಿ, ಕಮಲೇಶ್ ನಾಗರಕೋಟಿ, ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಉಳಿದಂತೆ ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್ ಹಾಗೂ ಕುಲ್ದೀಪ್ ಯಾದವ್ ತಲಾ ಒಂದು ವಿಕೆಟ್ ಕಬಳಿಸುವ ಮೂಲಕ ಜವಾಬ್ದಾರಿ ಪೂರೈಸಿದರು.
0 comments:
Post a Comment