ದುಬೈ, ಸೆ. 25,2020 (ಕರಾವಳಿ ಟೈಮ್ಸ್) : ಡೆಲ್ಲಿ ಕ್ಯಾಪಿಟಲ್ ತಂಡದ ಬೌಲರ್ ಗಳ ನಿಖರ ಹಾಗೂ ಶಿಸ್ತುಬದ್ಧ ದಾಳಿಗೆ ಕಂಗೆಟ್ಟ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಶುಕ್ರವಾರ ರಾತ್ರಿ ದುಬೈಯಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ 44 ರನ್ ಗಳ ಸೋಲುಣ್ಣುವ ಮೂಲಕ ಟೂರ್ನಿಯಲ್ಲಿ ಎರಡನೇ ಸೋಲು ಕಂಡರೆ, ಡೆಲ್ಲಿ ತಂಡ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರ ಭರ್ಜರಿ ಅರ್ಧಶತಕ ಹಾಗೂ ಪಂತ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 174 ರನ್ ಗಳಿಸಿತು.
175 ರನ್ ಗಳ ಗುರಿ ಬೆನ್ನತ್ತಿದ್ದ ಚೆನ್ನೈ ತಂಡದ ದಾಂಡಿಗರು ಆರಂಭದಿಂದಲೂ ನಿಧಾನಗತಿಯ ಆಟಕ್ಕೆ ಮಾರು ಹೋದರು. ಇನ್ನಿಂಗ್ಸ್ ಅಂತ್ಯಕ್ಕೆ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಲು ಮಾತ್ರ ಸಿ.ಎಸ್.ಕೆ. ಸಾಧ್ಯವಾಯಿತು. ನಾಯಕ ಮಹೇಂದ್ರ ಸಿಂಗ್ ಧೋನಿ ಕೊನೆಯವರೆಗೂ ಕ್ರೀಸಿನಲ್ಲಿದ್ದರೂ ತಂಡಕ್ಕೆ ಜಯ ಒದಗಿಸಲು ಸಾಧ್ಯವಾಗಿಲ್ಲ.
ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ರಬಡಾ ನಾಲ್ಕು ಓವರ್ ಎಸೆದು 26 ರನ್ ನೀಡಿ ಮೂರು ವಿಕೆಟ್ ಕಿತ್ತರೆ, ಅನ್ರಿಚ್ ನಾಟ್ರ್ಜೆ 4 ಓವರ್ ಎಸೆತಗಾರಿಕೆ ನಡೆಸಿ ಕೇವಲ 21 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್ ಪಟೇಲ್ ಏಕಮಾತ್ರ ವಿಕೆಟ್ ಪಡೆದರೂ 4 ಓವರ್ ಗಳಲ್ಲಿ ಕೇವಲ 18 ರನ್ ಬಿಟ್ಟುಕೊಟ್ಟು ನಿಯಂತ್ರಿತ ದಾಳಿ ನಡೆಸಿದರು.
ಚೆನ್ನೈ ಆರಂಭಿಕ ಆಟಗಾರ ಶೇನ್ ವಾಟ್ಸನ್ 14 ರನ್‍ಗಳಿಸಿ ಅಕ್ಷರ್ ಪಟೇಲ್ ಗೆ ವಿಕೆಟ್ ಒಪ್ಪಿಸಿದರು. ಮುರಳಿ ವಿಜಯ್ ಅನ್ರಿಚ್ ನಾಟ್ರ್ಜೆ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ಮೂಲಕ ಚೆನ್ನೈ ಆರು ಓವರ್ ಮುಕ್ತಾಯದ ವೇಳೆ ಎರಡು ಪ್ರಮುಖ ವಿಕೆಟ್ ಕಳೆದುಕೊಂಡು ಕೇವಲ 34 ರನ್ ಪೇರಿಸಿತು. ಇಲ್ಲದ ರನ್ ಕದಿಯಲು ಹೋಗಿ ಋತುರಾಜ್ ಗಾಯಕವಾಡ್ ರನೌಟ್ ಆದರು. ನಂತರ ಜೊತೆಯಾದ ಕೇದಾರ್ ಜಾಧವ್ ಮತ್ತು ಫಾಫ್ ಡು ಪ್ಲೆಸಿಸ್ ತಾಳ್ಮೆಯ ಆಟಕ್ಕೆ ಮುಂದಾದರು. ಈ ವೇಳೆ ಪ್ಲೆಸಿಸ್ ಅವರಿಗೆ ಹೆಟ್ಮಿಯರ್ ಅವರು ಒಂದು ಜೀವದಾನ ಕೂಡ ನೀಡಿದರು. 39 ಎಸೆತಗಳಲ್ಲಿ 54 ರನ್ ಜೊತೆಯಾಟವನ್ನು ಅನ್ರಿಚ್ ನಾಟ್ರ್ಜೆ ಮುರಿದು ಹಾಕಿದರು. 26 ರನ್ ಗಳಿಸಿ ಆಡುತ್ತಿದ್ದ ಜಾಧವ್ ಅವರನ್ನು ನಾಟ್ರ್ಜೆ ಅವರು ಎಲ್‍ಬಿಡಬ್ಯ್ಲೂಗೆ ಬೀಳಿಸಿದರು. ನಂತರ ರಬಡಾ ಅವರ ಬೌಲಿಂಗ್‍ನಲ್ಲಿ 43 ರನ್ ಸಿಡಿಸಿದ್ದ ಫಾಫ್ ಡು ಪ್ಲೆಸಿಸ್ ಅವರು ಔಟ್ ಆದರು. ಇದಾದ ನಂತರ ಕೊನೆಯ ಓವರಿನಲ್ಲಿ ನಾಯಕ ಧೋನಿಯವರು ಪಂತ್‍ಗೆ ಕ್ಯಾಚ್ ನೀಡಿ ಹೊರ ನಡೆದರು. ಇದಾದ ನಂತರ ಜಡೇಜಾ ಅವರು ಕೂಡ ರಬಡಾ ಬೌಲಿಂಗ್‍ಗೆ ಬಲಿಯಾದರು.
0 comments:
Post a Comment