ಗೆಲುವಿನ ಸನಿಹಕ್ಕೆ ಬಂದು ಎಡವಿದ ಪಂಜಾಬ್
ಐಪಿಎಲ್ ಇತಿಹಾಸದ 10ನೇ "ಸೂಪರ್ ಓವರ್"ಗೆ ಪಂದ್ಯ ಸಾಕ್ಷಿ
ದುಬೈ, ಸೆ. 21, 2020 (ಕರಾವಳಿ ಟೈಮ್ಸ್) : ಕನ್ನಡಿಗ ಮಯಾಂಕ್ ಅಗರ್ವಾಲ್ ಅವರ ನೆಲಕಚ್ಚಿದ ಬ್ಯಾಟಿಂಗ್ ಪರಿಣಾಮದಿಂದ ವಿಕೆಟ್ ಕಳೆದುಕೊಂಡರೂ ಪಂದ್ಯವನ್ನು ಟೈ ಮಾಡಲು ಪಂಜಾಬ್ ತಂಡಕ್ಕೆ ಸಾಧ್ಯವಾಯಿತಾದರೂ ಸೂಪರ್ ಓವರಿನಲ್ಲಿ ವಿಜಯಲಕ್ಷ್ಮಿ ಮಾತ್ರ ಡೆಲ್ಲಿ ತಂಡಕ್ಕೆ ಒಲಿದಳು. ಸೂಪರ್ ಓವರಿನಲ್ಲಿ ಡೆಲ್ಲಿ ತಂಡ ಪಂಜಾಬ್ ತಂಡವನ್ನು 10 ವಿಕೆಟ್ ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಗೆಲುವಿಗೆ 157 ರನ್‍ಗಳ ಸಾಧಾರಣ ಮೊತ್ತದ ಸವಾಲನ್ನು ಪಡೆದಿದ್ದರೂ ಪಂಜಾಬ್ ತಂಡ ಆರಂಭಿಕ ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡಿತ್ತು. ಆದರೆ ಒಂದು ಕಡೆ ಮಾಯಾಂಕ್ ಅಗರ್ವಾಲ್ ನೆಲಕಚ್ಚಿ ಆಡಿ 89 ರನ್ (60 ಎಸೆತ, 7 ಬೌಂಡರಿ, 4 ಸಿಕ್ಸರ್) ಹೊಡೆದು ತಂಡವನ್ನು ವಿಜಯದ ಬಾಗಿಲ ಬಳಿ ತಂದು ನಿಲ್ಲಿಸಿದ್ದರು. ಆದರೆ ಕೊನೆಯಲ್ಲಿ ಅದೃಷ್ಟ ಕೈಕೊಟ್ಟ ಪರಿಣಾಮ ಪಂದ್ಯ ಟೈ ಯಲ್ಲಿ ಮುಕ್ತಾಯಗೊಂಡಿದ್ದು, ಸೂಪರ್ ಓವರ್ ಮೊರೆ ಹೋಗುವಂತಾಯ್ತು.
ಕೊನೆಯ 18 ಎಸೆತಗಳಲ್ಲಿ ಪಂಜಾಬ್ 42 ರನ್ ಗಳಿಸಬೇಕಿತ್ತು. 18ನೇ ಓವರಿನಲ್ಲಿ 17 ರನ್ ಬಂದಿದ್ದರೆ, 19ನೇ ಓವರಿನಲ್ಲಿ 12 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 13 ರನ್ ಗಳ ಅವಶ್ಯಕತೆಯಿತ್ತು. ಮಾರ್ಕಸ್ ಸ್ಟೊಯಿನಿಸ್ ಎಸೆದ ಮೊದಲ ಎಸೆತವನ್ನು ಅಗರ್ವಾಲ್ ಸಿಕ್ಸರ್ ಗೆ ಅಟ್ಟಿದ್ದರೆ ಎರಡನೇ ಎಸೆತದಲ್ಲಿ 2 ರನ್ ಮೂರನೇ ಎಸೆತದಲ್ಲಿ ಬೌಂಡರಿ ಹೊಡೆದರು. ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತವನ್ನು ಬಲವಾಗಿ ಹೊಡೆದರೂ ಕ್ಯಾಚ್ ನೀಡಿ ಔಟಾದರು. ಕೊನೆಯ ಎಸೆತವನ್ನು ಎಡಗಡೆಗೆ ಜೋರ್ಡಾನ್ ಹೊಡೆದರೂ ಅದು ಕ್ಯಾಚ್ ಆಗಿತ್ತು. ಪಂದ್ಯ ಸಮಬಲಗೊಂಡ ಪರಿಣಾಮ ಸೂಪರ್ ಓವರ್ ಆಡಿಸಲಾಯಿತು.
ಸೂಪರ್ ಓವರಿನ ರಬಾಡ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲಿ 2 ರನ್ ಬಂದರೆ ಎರಡನೇ ಎಸೆತದಲ್ಲಿ ಕೆ.ಎಲ್. ರಾಹುಲ್ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಪೂರನ್ ಬೌಲ್ಡ್ ಆದರು. ಸೂಪರ್ ಓವರ್ ನಲ್ಲಿ ಎರಡು ವಿಕೆಟ್ ಕಳೆದುಕೊಂಡರೆ ತಂಡ ಆಲೌಟ್ ಎಂದು ಘೋಷಿಸಲಾಗುತ್ತದೆ. ಹೀಗಾಗಿ ಡೆಲ್ಲಿ ತಂಡ ಗೆಲುವಿಗೆ ಮೂರು ರನ್ ಗಳ ಗುರಿ ಪಡೆಯಿತು. ಬಳಿಕ ಪಂಜಾಬ್ ಪರವಾಗಿ ಎಸೆತಗಾರಿಕೆ ಆರಂಭಿಸಿದ ಮುಹಮ್ಮದ್ ಶಮಿ ಒಂದು ವೈಡ್ ಜೊತೆಗೆ ರಿಷಬ್ ಪಂತ್ 2 ರನ್ ಗಳಿಸುವ ಮೂಲಕ ಡೆಲ್ಲಿ ತಂಡ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಐಪಿಎಲ್ ಇತಿಹಾಸದಲ್ಲಿ 10ನೇ ಸೂಪರ್ ಓವರ್ ಪಂದ್ಯ ಇದಾಗಿತ್ತು.
ಕಿಂಗ್ಸ್ ಇಲೆವನ್ ಪಂಜಾಬ್ ತಂಡ 35 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ನಾಯಕ ಕೆಎಲ್ ರಾಹುಲ್ ಅವರು 19 ಬಾಲಿಗೆ 21 ರನ್ ಸಿಡಿಸಿ ಮೋಹಿತ್ ಶರ್ಮಾಗೆ ನಾಲ್ಕನೇ ಓವರಿನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ಕ್ರಿಸ್‍ಗೆ ಬಂದ ಮತ್ತೋರ್ವ ಆಟಗಾರ ಕರುಣ್ ನಾಯರ್ ಕೇವಲ ಒಂದು ರನ್ ಗಳಿಸಿ ಆರ್ ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ಇದಾದ ನಂತರ ಬಂದ ನಿಕೋಲಸ್ ಪೂರನ್ ಅವರ ಕೂಡ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಶೂನ್ಯ ಸಂಪಾದನೆಯೊಂದಿಗೆ ಪೆವಿಯಲಿಯನ್ ಗೆ ತೆರಳಿದರು. ಅಶ್ವಿನ್ ಒಂದೇ ಓವರಿನಲ್ಲಿ ಎರಡು ವಿಕೆಟ್ ಕಿತ್ತರು.
ನಾಲ್ಕನೇ ಬ್ಯಾಟ್ಸ್ ಮ್ಯಾನ್ ಆಗಿ ಕಣಕ್ಕಿಳಿದ ಗ್ಲೆನ್ ಮ್ಯಾಕ್ಸ್ ವೆಲ್ ಒಂದು ರನ್ ಗಳಿಸಿ ಕಗಿಸೊ ರಬಾಡ ಅವರ ಬೌಲಿಂಗ್‍ನಲ್ಲಿ ಶ್ರೇಯಾಸ್ ಅಯ್ಯರ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಇದಾದ ನಂತರ ಕೆಲ ಕಾಲ ಕ್ರಿಸ್‍ನಲ್ಲಿ ಉಳಿದುಕೊಳ್ಳುವ ಮುನ್ಸೂಚನೆ ನೀಡಿದ ಸರ್ಫರಾಜ್ ಖಾನ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕೇವಲ 12 ರನ್ ಗಳಿಸಿ ಆಕ್ಸಾರ್ ಪಟೇಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು.
ಈ ವೇಳೆ ಜೊತೆಯಾದ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೃಷ್ಣಪ್ಪ ಗೌತಮ್ ಉತ್ತಮ ಜೊತೆಯಾಟವಾಡಿದರು. 15 ಓವರ್ ಮುಕ್ತಾಯಕ್ಕೆ ಪಂಜಾಬ್ ತಂಡ 98 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು. ಮಯಾಂಕ್ ಅಗರ್ವಾಲ್ ಮತ್ತು ಗೌತಮ್ 6ನೇ ವಿಕೆಟಿಗೆ 46 ರನ್, ಅಗರ್ವಾಲ್ ಮತ್ತು ಜೋರ್ಡಾನ್ 7ನೇ ವಿಕೆಟಿಗೆ 56 ರನ್ ಜೊತೆಯಾಟವಾಡಿದ ಪರಿಣಾಮ ವಿಜಯದತ್ತ ಬಂದ ಪಂಜಾಬ್ ಕೊನೆಯಲ್ಲಿ ಮತ್ತೆ ಎಡವಿದ ಪರಿಣಾಮ ಪಂದ್ಯ ಟೈ ಆಗಿ ಅಂತ್ಯಗೊಂಡಿತು.
ಸ್ಪಿನ್ನರ್ ಆರ್. ಅಶ್ವಿನ್ ಫಿಲ್ಡಿಂಗ್ ವೇಳೆ ಕೈಗೆ ಗಾಯಗೊಂಡ ಪರಿಣಾಮ ಕ್ರೀಡಾಂಗಣವನ್ನು ತೊರೆದಿದ್ದರು. ಅಶ್ವಿನ್ 1 ಓವರ್ ಎಸೆದು 2 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಕ್ಕೆ ತಿರುವು ನೀಡಿದ್ದರು.
0 comments:
Post a Comment