ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ನಡುವೆ ಆರಂಭಿಕ ಪಂದ್ಯ
ದುಬೈ (ಕರಾವಳಿ ಟೈಮ್ಸ್) : ಕೊರೋನಾ ಸಂಕಷ್ಟದಿಂದ ಭಾರತದಿಂದ ವರ್ಗಾವಣೆಗೊಂಡಿರುವ ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಟೂರ್ನಿ ಈ ಬಾರಿ ಯುಎಇ ರಾಷ್ಟ್ರದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 19 ರಿಂದ ಆರಂಭವಾಗಲಿರುವ ಐಪಿಎಲ್-2020 ಆವೃತ್ತಿಯ ಲೀಗ್ ಹಂತದ ವೇಳಾಪಟ್ಟಿಯನ್ನು ಐಪಿಎಲ್ ಆಡಳಿತಾತ್ಮಕ ಸಮಿತಿ ಭಾನುವಾರ ಬಿಡುಗಡೆಗೊಳಿಸಿದೆ.
ಸೆಪ್ಟೆಂಬರ್ 19 ರಂದು ಅಬುದಾಬಿಯಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಸಂಪ್ರಾದಯದಂತೆ ಕಳೆದ ಟೂರ್ನಿಯ ಫೈನಲ್ ಆಡಿದ್ದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಎರಡನೇ ಪಂದ್ಯದಲ್ಲಿ ಡೆಲ್ಲಿ ಮತ್ತು ಪಂಜಾಬ್ ತಂಡಗಳ ನಡುವೆ ನಡೆಯಲಿದ್ದು, ಮೂರನೇ ಪಂದ್ಯ ಆರ್‍ಸಿಬಿ ಮತ್ತು ಹೈದರಾಬಾದ್ ತಂಡಗಳ ನಡುವೆ ಸಾಗಲಿದೆ.
ಈ ಮೊದಲು ಆಟಗಾರರಲ್ಲಿ ಮತ್ತು ಸಿಬ್ಬಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೊದಲ ಪಂದ್ಯದಲ್ಲಿ ಚೆನ್ನೈ ಆಡುವ ಬಗ್ಗೆ ಅನುಮಾನಿಸಲಾಗಿತ್ತು. ಆದರೆ ಇದೀಗ ಪ್ರಕಟಗೊಂಡಿರುವ ವೇಳಾಪಟ್ಟಿ ಈ ಸಂಶಯಕ್ಕೆ ಮುಕ್ತಿ ನೀಡಿದೆ.
ನವೆಂಬರ್ ಮೂರರವರೆಗೆ ಒಟ್ಟು 56 ಪಂದ್ಯಗಳು ನಡೆಯಲಿದ್ದು, 45 ದಿನಗಳ ಕಾಲ ಲೀಗ್ ಹಂತದ ಪಂದ್ಯಗಳು ನಡೆಯಲಿವೆ. ವಾರದ ದಿನಗಳಲ್ಲಿ ಕೇವಲ ಒಂದೇ ಪಂದ್ಯ ನಡೆಯಲಿದ್ದು, ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ. ವಾರಾಂತ್ಯಗಳಾದ ಶನಿವಾರ ಹಾಗೂ ಭಾನುವಾರ ಎರಡು ಪಂದ್ಯಗಳಿದ್ದು, ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ದ್ವಿತೀಯ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.
ದುಬೈ, ಶಾರ್ಜಾ ಮತ್ತು ಅಬುಧಾಬಿ ಮೈದಾನದಲ್ಲಿ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಅಬುಧಾಬಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕೊನೆಯ ಲೀಗ್ ಪಂದ್ಯ ಶಾರ್ಜಾ ಮೈದಾನದಲ್ಲಿ ನಡೆಯಲಿದೆ. ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಸಿಸಿಐ ಬಿಡುಗಡೆ ಮಾಡಿದ್ದು, ನಂತರ ನಡೆಯುವ ಕ್ವಾಲಿಫಯರ್, ಫೈನಲ್ ಪಂದ್ಯದ ಸ್ಥಳಗಳ ಮಾಹಿತಿಯನ್ನು ಸದ್ಯದ ವೇಳಾಪಟ್ಟಿಯಲ್ಲಿ ಪ್ರಕಟಿಸಲಾಗಿಲ್ಲ.
ಕಳೆದ ಮಾರ್ಚ್ ತಿಂಗಳಿನಲ್ಲೇ ನಡೆಯಬೇಕಿದ್ದ ಐಪಿಎಲ್ ಕೀವಿಡ್ ಹಾಗೂ ಲಾಕ್‍ಡೌನ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಬಳಿಕ ಭಾರತದಲ್ಲಿ ಕೊರೋನಾಘಾತ ಕಡಿಮೆಯಾಗದ ಹಿನ್ನಲೆಯಲ್ಲಿ ಐಪಿಎಲ್ ಟೂರ್ನಿಯನ್ನೇ ಭಾರತದಿಂದ ವರ್ಗಾಯಿಸಿ ದುಬೈಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದ ಹಿನ್ನಲೆಯಲ್ಲಿ ಇದೀಗ ಯುಎಇ ರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ನಡೆಯಲಿದ್ದು, ಈಗಾಗಲೇ ಎಲ್ಲ ತಂಡಗಳು ಯುಎಇ ತಲುಪಿದೆ. ಸೆಪ್ಟೆಂಬರ್ 19 ರಿಂದ ಸುದೀರ್ಘ ವಿರಾಮದ ಬಳಿಕ ಐಪಿಎಲ್ ಕ್ರಿಕೆಟ್ ಜಾತ್ರೆಗೆ ಚಾಲನೆ ದೊರೆಯಲಿದೆ.
0 comments:
Post a Comment