ಹೈದ್ರಾಬಾದ್ ಬೌಲರ್‍ಗಳ ಶಿಸ್ತಿನ ದಾಳಿಗೆ ಕುಸಿದ ಐಯ್ಯರ್ ಪಡೆಗೆ 15 ರನ್ ಸೋಲು
ಅಬುಧಾಬಿ, ಸೆ. 30, 2020 (ಕರಾವಳಿ ಟೈಮ್ಸ್) : ಸ್ಪಿನ್ನರ್ ರಶೀದ್ ಖಾನ್ ಅವರ ಮಾಂತ್ರಿಕ ಸ್ಪಿನ್ ದಾಳಿಗೆ ಕಂಗೆಟ್ಟ ಡೆಲ್ಲಿ ಚಾರ್ಜರ್ಸ್ ತಂಡ ಮಂಗಳವಾರ ರಾತ್ರಿ ಇಲ್ಲಿನ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯಾಟದ 11ನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್‍ಗೆ ಶರಣಾಗಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್, ಜಾನಿ ಬೈರ್‍ಸ್ಟೋವ್ ಅವರ ಉತ್ತಮ ಬ್ಯಾಟಿಂಗ್ ನೆವಿನಿಂದ ನಿಗದಿತ 20 ಓವರಿನಲ್ಲಿ 162 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡ ಹೈದರಾಬಾದ್ ತಂಡದ ದಾಳಿಗಾರರ ಕರಾರುವಾಕ್ ಎಸೆತಗಾರಿಕೆಗೆ ತಲೆಬಾಗಿ ನಿಗದಿತ 20 ಓವರ್‍ಗಳಲ್ಲಿ ಕೇವಲ 147 ರನ್‍ಗಳಿಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿ 15 ರನ್‍ಗಳ ಅಂತರದಿಂದ ಸೋಲು ಅನುಭವಿಸಿದೆ.
ರಶೀದ್ ಖಾನ್ ತಾನೆಸೆದ ಪ್ರಥಮ ಓವರಿನಲ್ಲೇ ಕ್ರೀಸಿಗೆ ಅಂಟಿಕೊಂಡಿದ್ದ ನಾಯಕ ಶ್ರೇಯಸ್ ಐಯ್ಯರ್ ಅವರನ್ನು ಔಟ್ ಮಾಡಿದರು. 12ನೇ ಓವರಿನಲ್ಲಿ ಮತ್ತೆ ಮ್ಯಾಜಿಕ್ ಮಾಡಿದ ರಶೀದ್ ಖಾನ್ ಶಿಖರ್ ಧವನ್ ಅವರನ್ನು ಔಟ್ ಮಾಡಿದರು. 16ನೇ ಓವರ್ ಎಸೆಯಲು ಬಂದ ರಶೀದ್ ರಿಷಬ್ ಪಂತ್ ಅವರಿಗೂ ಪೆವಿಲಿಯನ್ ಹಾದಿ ತೋರಿದರು. ನಾಲ್ಕು ಓವರ್‍ಗಳನ್ನು ಎಸೆದು ಕೇವಲ 14 ರನ್ ನೀಡಿ ಪ್ರಮುಖ 3 ವಿಕೆಟ್‍ಗಳನ್ನು ಕಿತ್ತ ರಶೀದ್ ಖಾನ್ ಡೆಲ್ಲಿ ತಂಡದ ಬೆನ್ನುಲುಬು ಮುರಿದರು.
ಭುವನೇಶ್ವರ್ ಕುಮಾರ್ ಅವರು ಕೂಡಾ 4 ಓವರ್ ಬೌಲ್ ಮಾಡಿ, 25 ರನ್ ನೀಡಿ 2 ವಿಕೆಟ್ ಕಿತ್ತರು. ಟಿ ನಟರಾಜನ್ 4 ಓವರ್‍ಗಳಲ್ಲಿ 25 ರನ್ ನೀಡಿ 1 ವಿಕೆಟ್ ಪಡೆದರು. ಹೈದರಾಬಾದ್ ಸ್ಪಿನ್ನರ್‍ಗಳ ಬಿಗುವಿನ ದಾಳಿ ಮುಂದೆ ಡೆಲ್ಲಿ ಆಟಗಾರರು ರನ್ ಗಳಿಸಲು ಅಕ್ಷರಶಃ ಪರದಾಟ ನಡೆಸಿದರು.
0 comments:
Post a Comment