ಮಂಗಳೂರು, ಸೆ. 20, 2020 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಭಾರೀ ಪ್ರಮಾಣದಲ್ಲಿ ದಾಖಲೆಯ ಮಳೆ ಸುರಿಯುತ್ತಿದ್ದು, ಜಲಮೂಲಗಳು ತುಂಬಿ ಹರಿಯುತ್ತಿದೆ. ಜನವಸತಿ ಪ್ರದೇಶಗಳು ಜಲಾವೃತಗೊಳ್ಳುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಸೋಮವಾರದ ಅಂತಿಮ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಉಡುಪಿ ಜಿಲ್ಲೆಯಾದ್ಯಂತ ತೀವ್ರ ರೀತಿಯಲ್ಲಿ ಮಳೆಯಾಗುತ್ತಿದ್ದು, ಕಾರ್ಕಳ ತಾಲೂಕಿನ ಮಾಳಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ. ಕಾರ್ಕಳ ಎಸ್ ಕೆ ಬಾರ್ಡರ್ ತಿರುವಿನಲ್ಲಿಯೂ ಗುಡ್ಡ ಕುಸಿತವಾಗಿದೆ. ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಹಲವು ಮರಗಳು ಧರೆಗುಳಿದಿವೆ. ಇದರಿಂದಾಗಿ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಉಭಯ ಜಿಲ್ಲೆಯ ಹಲವು ಭಾಗಗಳು ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ನಾಳೆ ನಡೆಯಬೇಕಾಗಿದ್ದ ಪದವಿ ಅಂತಿಮ ವರ್ಷದ ಪರೀಕ್ಷೆಯನ್ನು ಮುಂದೂಡಲಾಗಿದೆ. ಕೊರೊನಾ ಕಾರಣದಿಂದಾಗಿ ಆರು ತಿಂಗಳು ವಿಳಂಬವಾಗಿ ಆರಂಭಗೊಂಡಿರುವ ಅಂತಿಮ ಪದವಿ ಪರೀಕ್ಷೆಗೆ ಇದೀಗ ಮಳೆ ಅಡ್ಡಿಯಾಗಿದೆ. ಮಳೆಯಿಂದಾಗಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬರಲು ಅಡಚಣೆ ಆಗಬಹುದು ಎಂಬ ಕಾರಣದಿಂದ ಸೋಮವಾರದ ಪರೀಕ್ಷೆ ಮುಂದೂಡಲಾಗಿದೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿಯಲ್ಲಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಗಡಿಭಾಗದಲ್ಲಿರುವ ಶಾಂಭವಿ ನದಿ ಉಕ್ಕಿ ಹರಿಯುತ್ತಿದೆ. ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂದಿನ 24 ಗಂಟೆ ವಿಪರೀತ ಮಳೆ ಬೀಳುವ ಸಾಧ್ಯತೆ ಇದ್ದು, ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ಅಗ್ನಿಶಾಮಕ ದಳ ನೆರೆ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡವನ್ನು ಕರೆಸಿಕೊಳ್ಳಲಾತ್ತಿದೆ.
ಹಿರಿಯಡ್ಕ ಸಮೀಪ ಸುವರ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿ ನಿರ್ಮಿಸಲಾದ ವಿದ್ಯುತ್ ಉತ್ಪಾದನಾ ಘಟಕದ ಸುತ್ತಮುತ್ತ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿದೆ. ಉಡುಪಿ ಕುಡಿಯುವ ನೀರಿನ ಯೋಜನೆ ಸ್ವರ್ಣ ನದಿಯ ಬಜೆ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲ ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ರಾತ್ರೋರಾತ್ರಿ ಸುರಿದ ಭಾರೀ ಮಳೆಗೆ ಉದ್ಯಾವರ ಗ್ರಾಮದ ಪಿತ್ರೋಡಿಯ ಕೆಲ ಪ್ರದೇಶ ಜಲಾವೃತವಾಗಿದೆ. ಗಜನೆ, ಪಟ್ನಾ ಪರಿಸರದಲ್ಲಿ ಕೃತಕ ನೆರೆ ಉಂಟಾಗಿದ್ದು, ಅಪಾಯದ ಅಂಚಿನಲ್ಲಿದ್ದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಯಿಸಿ, ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎಲ್ಲಾ ಅಗತ್ಯ ಪೂರೈಕೆಗಳನ್ನು ಉಡುಪಿ ಜಿಲ್ಲೆಗೆ ಮಾಡುವಂತೆ ಮನವಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಎನ್‌ಡಿಆರ್‌ಎಫ್ ತಂಡ ಉಡುಪಿಗೆ ಹೊರಟು ಕಾರ್ಯಾಚರಣೆ ನಡೆಸುತ್ತಿದೆ. ಹೆಲ್ಪ್ ಲೈನ್ ನಂಬರ್‌ಗಳನ್ನು ಸಹ ತೆರೆಯಲಾಗಿದ್ದು, ಜಿಲ್ಲಾಡಳಿತ ಜನರ ರಕ್ಷಣೆಗೆ ಬದ್ಧವಾಗಿದೆ ಎಂದರು.
ಹಿರಿಯಡ್ಕ ಸಮೀಪದ ಪುತ್ತಿಗೆ ವಿದ್ಯಾಪೀಠಕ್ಕೆ ನೀರು ನುಗ್ಗಿದ್ದು, ಮಠದ ಗೋಶಾಲೆ ಜಲಾವೃತವಾಗಿದೆ. ತಕ್ಷಣ ಸ್ಥಳೀಯರ ನೆರವಿನೊಂದಿಗೆ ಗೋವುಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
0 comments:
Post a Comment