ಬೆಂಗಳೂರು, ಸೆ. 11, 2020 (ಕರಾವಳಿ ಟೈಮ್ಸ್) : ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ದಿನವಿಡೀ ಭಾರೀ ಮಳೆಯಾಗಿದ್ದು, ಜನತೆ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುತ್ತಿದೆ.
ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಇಂಗಳಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಾರವಾರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಎಚ್ಚರಿಸಲಾಗಿದೆ.
ಕಾರವಾರ, ಕುಮಟಾ, ಹೊನ್ನಾವರ ಸೇರಿದಂತೆ ಬಹುತೇಕ ಭಾಗದಲ್ಲಿ ಇನ್ನೆರೆಡು ದಿನ ಭಾರೀ ಮಳೆ ಮುಂದುವರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದೆ.
ಭಟ್ಕಳ ಬಳಿ ಸಮುದ್ರದ ಮಧ್ಯೆ ಬಿರುಗಾಳಿಗೆ ಸಿಕ್ಕಿದ್ದ ಬೋಟ್‍ನಲ್ಲಿದ್ದ 24 ಮಂದಿಯನ್ನು ರಕ್ಷಿಲಾಗಿದೆ. ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನೂರಾರು ಮನೆಗಳು ಪ್ರವಾಹಕ್ಕೆ ಸಿಲುಕಿವೆ. ನಗರದ ಕೊಂಚಾಡಿಯಲ್ಲಿರುವ 12 ಅಂತಸ್ತಿನ ಎಸೆಲ್ ಹೈಟ್ಸ್ ಎಂಬ ಫ್ಲ್ಯಾಟ್ ಹಿಂಭಾಗದ ಧರೆ ಕುಸಿತವಾಗಿದ್ದು, ಮಣ್ಣಿನಡಿಯಲ್ಲಿ ಹಲವು ವಾಹನಗಳು ಸಿಲುಕಿವೆ. ಫ್ಲ್ಯಾಟ್ ನಲ್ಲಿದ್ದ ನೂರಾರು ಮಂದಿ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಫ್ಲಾಟ್ ಮುಂಭಾಗದ ರಸ್ತೆ ಬಂದ್ ಮಾಡಲಾಗಿದ್ದು, ಸ್ಥಳದಲ್ಲಿ ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್. ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದಾರೆ.
ಕೊಡಗಿನಲ್ಲಿ ಕಳೆದ ರಾತ್ರಿ ಧಾರಾಕಾರ ಮಳೆಯಾಗಿದ್ದು, ತಲಕಾವೇರಿ, ಭಾಗಮಂಡಲ, ತ್ರಿವೇಣಿ ಸಂಗಮದ ಬಳಿ ಪ್ರವಾಹ ಸೃಷ್ಟಿಯಾಗುವ ಆತಂಕ ಎದುರಾಗಿದೆ. ಕೋಳಿಕಾಡು, ಚೇರಂಗಾಲ, ಕೋರಂಗಾಲ ಗ್ರಾಮಗಳಲ್ಲಿ ಭೂಕುಸಿತದ ಬಗ್ಗೆ ಆತಂಕಪಡಲಾಗಿದೆ.
0 comments:
Post a Comment