ಬೆಂಗಳೂರು, ಸೆ. 19, 2020 (ಕರಾವಳಿ ಟೈಮ್ಸ್) : ಮುಂದಿನ ಎರಡು ದಿನಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈಗಾಗಲೇ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ಮತ್ತು ಬಳ್ಳಾರಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಆರ್ಭಟಕ್ಕೆ ಹಲವು ರಸ್ತೆಗಳು ಕೊಚ್ಚಿ ಹೋಗಿದ್ದು, ಸೇತುವೆಗಳು ಮುಳುಗಿವೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಬೆಳೆ ನಾಶ ಪರಿಣಾಮ ರೈತರು ಆಕಾಶಕ್ಕೆ ನೋಡುವಂತಾಗಿದೆ. ಈ ಎಲ್ಲಾ ಆಸ್ತಿ-ಪಾಸ್ತಿ ನಷ್ಟಗಳ ಮಧ್ಯೆ ರಾಜ್ಯಾದ್ಯಂತ ಮತ್ತೆ ಮಹಾಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ರಾಜ್ಯದ ಜನ ಆತಂಕಿತರಾಗುವಂತೆ ಮಾಡಿದೆ.
ಭಾನುವಾರ ಹಾಗೂ ಸೋಮವಾರ ಕರ್ನಾಟಕ ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗ ಮತ್ತೆ ಕರಾವಳಿ ಭಾಗ, ಬಳ್ಳಾರಿ, ಧಾರವಾಡ ಮತ್ತು ಚಿಕ್ಕಮಗಳೂರಿನಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದ್ದು, ಈ ಎಲ್ಲ ಜಿಲ್ಲೆಗಳಲ್ಲೂ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತಿದೆ.
ಈಗಾಗಲೇ ಕಲಬುರಗಿಯ ಅಫ್ಝಲ್‍ಪುರ, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತಗೊಂಡಿದೆ. ಕಾಳಗಿ ತಾಲೂಕಿನ ನೀಲಕಂಠೇಶ್ವರ ದೇಗುಲ ಮುಳುಗಡೆಗೊಂಡಿದೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣ ಸಂಪೂರ್ಣ ಜಲಾವೃತವಾಗಿದೆ. ಕಾಗಿಣಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಕಲಬುರಗಿ-ಸೇಡಂ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಗಡಿಜಿಲ್ಲೆ ಬೀದರಿನ ಔರಾದ್, ಬಸವಕಲ್ಯಾಣ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ. ಭಾಲ್ಕಿ ತಾಲೂಕಿನ ಜಮಖಂಡಿ ಗ್ರಾಮದ ಬಳಿ ಸೇತುವೆ ದಾಟುವಾಗ ಕೋಳಿ ಆಹಾರ ಸಾಗಿಸುತ್ತಿದ್ದ ಲಾರಿ ನೀರು ಪಾಲಾಗಿದೆ. ರಾಯಚೂರು ಜಿಲ್ಲೆ ಇಡಪನೂರು, ಮಿಡಗಲದಿನ್ನಿ ಗ್ರಾಮ ಮುಳುಗಡೆಯಾಗಿದೆ. ಸತತ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಯಾದಗಿರಿ ಜಿಲ್ಲೆಯಲ್ಲೂ ಮಳೆಯ ಅಬ್ಬರ ಜೋರಾಗಿದೆ. ಮುಂಗಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಬಾಚ್ವಾರ ಗ್ರಾಮದ ಸಂಪರ್ಕ ಕಡಿತವಾಗಿದೆ. ಇದೀಗ ಮತ್ತೆ ಎರಡು ದಿನಗಳ ಕಾಲ ಮಹಾಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ನಚ್ಚರಿಕೆ ನೀಡಿದ್ದು, ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜನರಿಗೆ ಆಯಾ ಜಿಲ್ಲಾಡಳಿತಗಳು ಸೂಚಿಸಿವೆ.
0 comments:
Post a Comment