ನವದೆಹಲಿ (ಕರಾವಳಿ ಟೈಮ್ಸ್) : ಅಡುಗೆ ಅನಿಲ ಸಿಲಿಂಡರ್ ಮೇಲೆ ದೊರೆಯುತ್ತಿದ್ದ ಸಬ್ಸಿಡಿ ಮೊತ್ತ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುವುದು ಕಳೆದ ನಾಲ್ಕೈದು ತಿಂಗಳುಗಳಿಂದ ಸಂಪೂರ್ಣ ನಿಂತು ಹೋಗಿದ್ದು, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಸರಕಾರದ ವತಿಯಿಂದ ಇನ್ನೂ ಹೊರಬಿದ್ದಿಲ್ಲ. ಆದರೆ ಸಬ್ಸಿಡಿ ಮೊತ್ತಕ್ಕಾಗಿ ಕಾಯುತ್ತಿದ್ದ ಅಡುಗೆ ಅನಿಲ ಗ್ರಾಹಕರು ಮಾತ್ರ ಇದೀಗ ತೀವ್ರ ಕಂಗಾಲಾಗಿದ್ದಾರೆ.
ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಉಂಟಾಗುತ್ತಿರುವ ಏರಿಳಿತದಿಂದಾಗಿ ಸರಕಾರ ಈ ಸಬ್ಸಿಡಿ ಮೊತ್ತ ಕಡಿತಗೊಳಿಸಿರುವುದಾಗಿ ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ಸಬ್ಸಿಡಿ ವರ್ಗಾವಣೆ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ ಎಂದು ಹೇಳಲಾಗಿದೆ.
ಸರಕಾರ ಕಳೆದ ನಾಲ್ಕು ತಿಂಗಳುಗಳಿಂದ ಯಾವುದೇ ಫಲಾನುಭವಿಗಳ ಖಾತೆಗಳಿಗೆ ನಗದು ವರ್ಗಾವಣೆ ಮಾಡದಿರುವ ಬಗ್ಗೆ ಗ್ರಾಹಕರು ಕೇಂದ್ರ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ 27 ಕೋಟಿ ಎಲ್‍ಪಿಜಿ ಗ್ರಾಹಕರಿದ್ದು, ಸಬ್ಸಿಡಿ ರದ್ದತಿಯಿಂದಾಗಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ದೇಶದ ಜನ ಕೇಂದ್ರ ಸರಕಾರ ಪಬ್ಜಿ ಬ್ಯಾನ್ ಮಾಡಿ ಪಡೆಯುತ್ತಿರುವ ಪ್ರಚಾರಕ್ಕಿಂತ ಗ್ಯಾಸ್ ಸಬ್ಸಿಡಿ ರದ್ದತಿ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ, ಪ್ರಚಾರಗಳು ನಡೆಸುವ ಮೂಲಕ ಸರಕಾರದ ಜನವಿರೋಧಿ ನೀತಿಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದೆ.
0 comments:
Post a Comment