ದುಬೈ, ಸೆ. 25, 2020 (ಕರಾವಳಿ ಟೈಮ್ಸ್) : ನಾಯಕ ಕೆ.ಎಲ್ ರಾಹುಲ್ ಅವರ ಸಿಡಿಲಬ್ಬರದ ಅಜೇಯ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-2020ಯಲ್ಲಿ ತನ್ನ ಮೊದಲ ಗೆಲುವನ್ನು ಗುರುವಾರ ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ತಂಡ, ನಾಯಕ ಕೆ.ಎಲ್. ರಾಹುಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ ಬರೋಬ್ಬರಿ 206 ರನ್ ಗಳ ದೊಡ್ಡ ಮೊತ್ತ ಕಲೆ ಹಾಕಿತು. ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಕೊಹ್ಲಿ ಪಡೆ ಆರಂಭದಲ್ಲೇ ಮುಗ್ಗರಿಸಿತು. ಅಂತಿಮವಾಗಿ 16.5 ಓವರ್ ಗಳಲ್ಲಿ ಆರ್.ಸಿ.ಬಿ. ಜುಜುಬಿ 109 ರನ್‍ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಪಂಜಾಬ್ 98 ರನ್‍ಗಳ ದೊಡ್ಡ ಅಂತರದಲ್ಲಿ ಗೆಲವು ಸಾಧಿಸಿತು.
ಪಂಜಾಬ್ ಪರವಾಗಿ ರವಿ ಬಿಷ್ಣೋಯ್ ನಾಲ್ಕು ಓವರ್ ಬೌಲ್ ಮಾಡಿ 21 ರನ್ ಬಿಟ್ಟುಕೊಟ್ಟು ಮೂರು ವಿಕೆಟ್ ಕಿತ್ತರು. ಶೆಲ್ಡನ್ ಕಾಟ್ರೆಲ್ ಅವರು 3 ಓವರ್ ಬೌಲ್ ಮಾಡಿ 17 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಿತ್ತರು. ಮೊಹಮ್ಮದ್ ಶಮಿ 3 ಓವರ್ ಬೌಲ್ ಮಾಡಿ 14 ರನ್ ನೀಡಿ ಒಂದು ವಿಕೆಟ್ ಪಡೆದರು.
ಬೆಂಗಳೂರು ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್, ಮೊದಲ ಓವರಿನಲ್ಲೇ ಒಂದು ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ರವಿ ಬಿಷ್ಣೋಯ್ ಅವರಿಗೆ ಕ್ಯಾಚ್ ನೀಡಿ ಔಟ್ ಆದರು. ಬಳಿಕ ಬಂದ ಜೋಶ್ ಫಿಲಿಪ್ ಅವರು ಸೂನ್ಯ ಸಂಪಾದಿಸಿ ಮೊಹಮ್ಮದ್ ಶಮಿ ಅವರಿಗೆ ಬಲಿಯಾದರು. ಮೂರನೇ ಓವರಿನಲ್ಲಿ ನಾಯಕ ವಿರಾಟ್ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕಾಟ್ರೆಲ್ ಅವರಿಗೆ ವಿಕೆಟ್ ಒಪ್ಪಿಸಿದರು.
ಎಬಿ ಡಿವಿಲಿಯರ್ಸ್ ಹಾಗೂ ಆರನ್ ಫಿಂಚ್ ಕೊಂಚ ಉತ್ತಮವಾಗಿ ಬ್ಯಾಟ್ ಬೀಸಿದ ಪರಿಣಾಮ ಬೆಂಗಳೂರು ತಂಡ ಪವರ್ ಪ್ಲೇ ಮುಕ್ತಾಯದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 40 ರನ್ ಪೇರಿಸಿತ್ತು. ನಂತರ ಏಳನೇ ಓವರಿನಲ್ಲಿ 20 ರನ್ ಗಳಿಸಿದ್ದ ಆರನ್ ಫಿಂಚ್ ಅವರು ರವಿ ಬಿಷ್ಣೋಯ್ ಅವರಿಗೆ ಕ್ಲೀನ್ ಬೌಲ್ಡ್ ಆದರು. ಮುರುಗನ್ ಅಶ್ವಿನ್ ಅವರ ಬೌಲಿಂಗ್‍ನಲ್ಲಿ ಸರ್ಫರಾಜ್ ಖಾನ್ ಅವರಿಗೆ ಕ್ಯಾಚ್ ನೀಡಿ ಹೊರನಡೆದರು. ಬಳಿಕ 28 ರನ್ ಗಳಿಸಿದ್ದ ಡಿವಿಲಿಯರ್ಸ್ ಔಟ್ ಆದರು.
ಕೊನೆಯದಾಗಿ ವಾಷಿಂಗ್ಟನ್ ಸುಂದರ್ ಮತ್ತು ಶಿವಂ ದುಬೆ ಒಂದಷ್ಟು ಪ್ರತಿರೋಧ ತೋರಿದರು. ಆದರೆ 12ನೇ ಓವರಿನ ಕೊನೆ ಬಾಲಿನಲ್ಲಿ ಮ್ಯಾಕ್ಸ್ ವೆಲ್ ಅವರಿಗೆ ಶಿವಂ ದುಬೆ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ಉಮೇಶ್ ಯಾದವ್ ಶೂನ್ಯಕ್ಕೆ ಔಟಾದರು. 30 ರನ್ ಗಳಿಸಿ ಆಡುತ್ತಿದ್ದ ವಾಷಿಂಗ್ಟನ್ ಸುಂದರ್ ಅವರು ರವಿ ಬಿಷ್ಣೋಯ್ ಬೌಲಿಂಗ್‍ನಲ್ಲಿ ಕ್ಯಾಚ್ ಆಗಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ಸೈನಿ ಮತ್ತು ಚಹಲ್ ಔಟ್ ಆಗುವ ಮೂಲಕ ಬೆಂಗಳೂರು ತಂಡ ಆಲ್‍ಔಟ್ ಆಯ್ತು.
0 comments:
Post a Comment