ಬೆಂಗಳೂರು, ಸೆ. 15, 2020 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ ಡ್ರಗ್ಸ್ ಪ್ರಕರಣದಲ್ಲಿ ಬಳಕೆದಾರರು ಹಾಗೂ ದಲ್ಲಾಳಿಗಳು ಹೆಚ್ಚಿನ ಪ್ರಮಾಣಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ ಎಂಬ ಆತಂಕಕಾರಿ ಮಾಹಿತಿ ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಇಲಾಖೆಯ ಮೂಲಕ ಬಹಿರಂಗಗೊಂಡಿದೆ.
ಬೆಂಗಳೂರು ನಗರ ಪೊಲೀಸರು ಕಳೆದ ಒಂದೇ ತಿಂಗಳ ಅವಧಿಯಲ್ಲಿ 300ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದು, ಇದುವರೆಗೆ ನಡೆಸಿದ ದಾಳಿಗಳಲ್ಲೇ ಇದು ದೊಡ್ಡ ಪ್ರಮಾಣದ ದಾಳಿಯಾಗಿದೆ ಎನ್ನಲಾಗಿದೆ. ಪೊಲೀಸರ ದಾಳಿ ವೇಳೆ ದಸ್ತಗಿರಿಯಾಗಿರುವ ಆರೋಪಿಗಳ ಪೈಕಿ ಹೆಚ್ಚಿನವರು 18 ರಿಂದ 25 ವರ್ಷದೊಳಗಿನ ಯುವ ಸಮೂಹಕ್ಕೆ ಸೇರಿದವರಾಗಿದ್ದಾರೆ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಮಾದಕವಸ್ತು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ ಗೃಹ ಸಚಿವರು ಕಠಿಣ ಆದೇಶ ನೀಡಿರುವ ಹಿನ್ನಲೆಯಲ್ಲಿ ಇದೀಗ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ದಾಳಿಗಳು ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಪೂರ್ವ) ಎಸ್ ಮುರುಗನ್ ಅವರು, ಕಳೆದ ಒಂದು ತಿಂಗಳ ಅವಧಿಯಲ್ಲಿ ದಾಳಿಗಳ ಪ್ರಮಾಣ ಐದು ಪಟ್ಟು ಹೆಚ್ಚಾಗಿದೆ. ದಾಳಿ ವೇಳೆ ಸಿಕ್ಕಿ ಹಾಕಿಕೊಂಡವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳೇ ಆಗಿದ್ದಾರೆ. ಇತರೆ ರಾಜ್ಯ, ದೇಶಗಳಿಂದ ವಿದ್ಯಾಭ್ಯಾಸಕ್ಕೆ ಬಂದವರು, ಇಲ್ಲಿ ಡ್ರಗ್ಸ್ ಚಟಕ್ಕೆ ಬಲಿಯಾಗುತ್ತಿದ್ದಾರೆ. ಅಲ್ಲದೆ ಬಹುತೇಕರು ಡ್ರಗ್ಸ್ ವ್ಯಸನದಿಂದಲೇ ಶಿಕ್ಷಣ ತ್ಯಜಿಸಿ ದಾರಿ ತಪ್ಪುತ್ತಿದ್ದಾರೆ. ಡಾರ್ಕ್‍ನೆಟ್‍ನಲ್ಲಿ ಸಿಂಥೆಟಿಕ್ ಡ್ರಗ್‍ಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದಿದ್ದಾರೆ.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ 2018ರಲ್ಲಿ 286 ಪ್ರಕರಣಗಳು ಪತ್ತೆಯಾಗಿತ್ತು. 2019ರಲ್ಲಿ 768 ಪ್ರಕರಣಗಳು ದಾಖಲಾಗಿತ್ತು. 2020ರಲ್ಲಿ ಈ ಪ್ರಮಾಣ 530 ಆಗಿದೆ ಎನ್ನಲಾಗಿದೆ.
ಡಾರ್ಕ್ ನೆಟ್‍ವರ್ಕ್ ಎಂದರೇನು?
ಸಾಮಾನ್ಯವಾಗಿ ಯಾವುದೇ ಫಲಿತಾಂಶಕ್ಕಾಗಿ ನಾವು ಸರ್ಚ್ ಎಂಜಿನ್‍ಗಳನ್ನು ಬಳಕೆ ಮಾಡುತ್ತೇವೆ. ಆದರೆ ನಾವು ಬಳಕೆ ಮಾಡುವ ಪ್ರತಿಯೊಂದು ಅಂಶಗಳೂ ದಾಖಲಾಗುತ್ತಾ ಹೋಗುತ್ತದೆ. ಆದರೆ ಕ್ರೈಮ್ ಲೋಕಕ್ಕೆ ಸಂಬಂಧಿಸಿದ ಕೆಲ ಗೌಪ್ಯ ಸರ್ಚ್ ಎಂಜಿನ್‍ಗಳಿವೆ. ಇವುಗಳನ್ನು ಸಾಮಾನ್ಯವಾಗಿ ಡಾರ್ಕ್‍ನೆಟ್ ಅಥವಾ ಡೀಪ್‍ನೆಟ್‍ಗಳೆನ್ನಲಾಗುತ್ತದೆ. ಈ ಸರ್ಚ್ ಎಂಜಿನ್‍ಗಳಲ್ಲಿ ಸಮಾಜ ವಿದ್ರೋಹಿ ಅಥವಾ ಕಾನೂನು ಬಾಹಿರ ಚಟುವಟಿಕೆಗಳೇ ಹೆಚ್ಚಾಗಿ ನಡೆಯುತ್ತವೆ. ಇಲ್ಲಿ ಬಳಕೆದಾರರಾಗಲಿ, ಮಾಹಿತಿದಾರರನಾಗಲಿ ಇತರೆ ಇನ್ನಾವುದೇ ಮಾಹಿತಿಗಳೂ ಯಾರಿಗೂ ಲಭ್ಯವಾಗುವುದಿಲ್ಲ. ಬಳಕೆದಾರ ಯಾವ ವೆಬ್‍ಸೈಟ್ ನೋಡುತ್ತಿದ್ದಾನೆ. ಯಾವ ವಿಚಾರದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾನೆ ಎಂಬಿತ್ಯಾದಿ ಅಂಶಗಳು ಲಭ್ಯವಾಗುವುದೇ ಇಲ್ಲ. ಇದೇ ಕಾರಣಕ್ಕೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರು ಇಂತಹ ಡಾರ್ಕ್‍ನೆಟ್‍ಗಳನ್ನೇ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದರಿಂದ ಅವರು ಸಿಕ್ಕಿ ಬೀಳುವ ಸಾಧ್ಯತೆಗಳೇ ಇರುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕ್ ವಂಚನೆ, ಡ್ರಗ್ಸ್, ಮಾನವ ಕಳ್ಳ ಸಾಗಣೆ, ಭೂಗತ ಲೋಕ, ಸೇರಿದಂತೆ ಹಲವು ಸಮಾಜ ವಿದ್ರೋಹಿ ಚಟುವಟಿಕೆಗಳ ಕಾರ್ಯಾಚರಣೆಯ ವೇದಿಕೆ ಇದೇ ಡಾರ್ಕ್‍ನೆಟ್ ಆಗಿರುತ್ತದೆ.
ಇದೇ ಡಾರ್ಕ್‍ನೆಟ್‍ನಲ್ಲಿ ಡ್ರಗ್ಸ್ ವಹಿವಾಟು ನಡೆಯುತ್ತದೆ. ಬಳಕೆದಾರ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಖರೀದಿಗೆ ಮುಂದಾದರೆ ಆ ವಹಿವಾಟು ವೇಗವಾಗಿ ನಡೆಯುತ್ತದೆ. ಒಂದು ವೇಳೆ ಸಣ್ಣ ಪ್ರಮಾಣದ್ದಾಗಿದ್ದರೆ ಇದರ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತದೆ. ಹೀಗಾಗಿ ನಿಧಾನಗತಿಯಲ್ಲಿ ವಹಿವಾಟು ಸಾಗುವಾಗ ಪೊಲೀಸರಿಗೆ ಸಿಕ್ಕಿಬೀಳುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಕೆಲ ಪೆಡ್ಲರ್‍ಗಳು ದೊಡ್ಡ ಪ್ರಮಾಣದ ವಹಿವಾಟಿಗೆ ಹೆಚ್ಚಿನ ಒತ್ತು ನೀಡುತ್ತಾರೆ ಎಂದು ಸೈಬರ್ ಕ್ರೈಮ್ ಅಧಿಕಾರಿಗಳು ಹೇಳುತ್ತಾರೆ.
ಡ್ರಗ್ಸ್ ವಹಿವಾಟಿನಲ್ಲಿ ಸಿಕ್ಕಿ ಬೀಳುವ ಅಪಾಯವಿದ್ದರೂ ಕಳೆದ ಕೆಲ ವರ್ಷಗಳಿಂದ ಇವುಗಳ ದರಗಳು ಮಾತ್ರ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಪೆಡ್ಲರ್‍ಗಳು ಹೆಚ್ಚಿನ ರಿಸ್ಕ್ ತೆಗೆದುಕೊಂಡು ವಹಿವಾಟು ನಡೆಸುತ್ತಿದ್ದಾರೆ. ಡ್ರಗ್ಸ್‍ನ ಕ್ವಾಲಿಟಿ ಮತ್ತು ಕ್ವಾಂಟಿಟಿ (ಗುಣಮಟ್ಟ ಮತ್ತು ಪ್ರಮಾಣ) ಮೇಲೆ ದರಗಳು ನಿರ್ಧಾರವಾಗಿರುತ್ತದೆ. ಉದಾಹರಣೆಗೆ ಈ ಹಿಂದೆ 10 ಗ್ರಾಂ ಗಾಂಜಾಗೆ 500 ರೂಪಾಯಿ ಬೆಲೆ ನಿರ್ಧರಿಸಲಾಗುತ್ತಿತ್ತು. ಆದರೆ ಪ್ರಸ್ತುತ 20 ಗ್ರಾಂ ಪ್ಯಾಕೆಟ್‍ಗೆ 1500 ರಿಂದ 2000 ರೂಪಾಯಿಗಳವರೆಗೂ ಬೆಲೆ ಏರಿಕೆಯಾಗಿವೆ. ಅಂತಾರಾಷ್ಟ್ರೀಯ ಡ್ರಗ್ಸ್ ವ್ಯಾಪಾರ ಇದೀಗ ಬಿಟ್ ಕಾಯಿನ್‍ಗಳ ಮೇಲೆ ಆಧಾರಿತವಾಗಿದೆ. ಕಾರಣ ಒಂದು ಬಿಟ್ ಕಾಯಿನ್ ದರ ಸುಮಾರು 7 ಲಕ್ಷ ರೂಪಾಯಿಗಳಾಗುತ್ತದೆ. ಇದರಿಂದ ವಹಿವಾಟು ಕೂಡ ಸುಲಭವಾಗುತ್ತದೆ ಎಂಬುದು ಪೆಡ್ಲರ್‍ಗಳ ನಂಬಿಕೆ. ಆದರೆ ಪೆಡ್ಲರ್‍ಗಳಾಗಿ ಬದಲಾಗಿರುವ ವಿದ್ಯಾರ್ಥಿಗಳಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಎಲ್ಲಿಂದ ಬರುತ್ತಿದೆ ಎಂಬುದು ಪೊಲೀಸರಿಗೆ ತಲೆನೋವಾಗಿರುವ ಸಂಗತಿಯಾಗಿದೆ.
0 comments:
Post a Comment