ಲಖನೌ (ಕರಾವಳಿ ಟೈಮ್ಸ್) : ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಸುಮಾರು 8 ತಿಂಗಳ ಸೆರೆವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಉತ್ತರ ಪ್ರದೇಶದ ವೈದ್ಯ ಡಾ ಕಫೀಲ್ ಖಾನ್ ಉತ್ತರ ಪ್ರದೇಶದ ಯೋಗಿ ಸರಕಾರದ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಜೈಲಿಂದ ಹೊರ ಬರುತ್ತಲೇ ಹೊರಗಡೆ ಕಾಯುತ್ತಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಾ. ಕಫೀಲ್ ಖಾನ್ ಉತ್ತರ ಪ್ರದೇಶ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ತಮ್ಮ ಬಂಧನವನ್ನು ಕಾನೂನು ಮತ್ತು ಸಂವಿಧಾನ ವಿರೋಧಿ ಕೃತ್ಯ ಎಂದು ಹೇಳಿದ ಕಫೀಲ್ ಖಾನ್, ಸದ್ಯ ನನ್ನನ್ನು ಎನ್ಕೌಂಟರ್ ಮಾಡದೆ ಇರುವುದೇ ಹೆಚ್ಚು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಘನತೆವೆತ್ತ ನ್ಯಾಯಾಲಯವು ಅತ್ಯುತ್ತಮ ಆದೇಶ ನೀಡಿದೆ. ಆ ಮೂಲಕ ದೇಶದ ಜನತೆಗೆ ನ್ಯಾಯಾಂಗ ವ್ಯವಸ್ಥೆ ಮೇಲಿನ ನಂಬಿಕೆ ಇನ್ನೂ ಗಟ್ಟಿಯಾಗಿದೆ. ನ್ಯಾಯಾಲಯದ ಆದೇಶದ ಮೂಲಕ ನನ್ನ ಭಾಷಣ ಪ್ರಚೋದನಕಾರಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಅಂತೆಯೇ ಮುಂಬೈಯಿಂದ ಮಥುರಾಗೆ ನನ್ನನ್ನು ಎನ್ಕೌಂಟರ್ ಮಾಡದೇ ಕರೆತಂದ ಎಸ್‍ಟಿಎಫ್ ಅಧಿಕಾರಿಗಳಿಗೂ ನಾನು ಅಭಾರಿಯಾಗಿದ್ದೇನೆ ಎಂದು ಡಾ. ಕಫೀಲ್ ಖಾನ್ ಹೇಳಿದ್ದಾರೆ.
ಇದೇ ವೇಳೆ ರಾಮಾಯಣದ ಉಲ್ಲೇಖ ಮಾಡಿದ ಕಫೀಲ್ ಖಾನ್, ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿ ರಾಜ ತನ್ನ ಪ್ರಜೆಗಳ ಕುರಿತಂತೆ ರಾಜಧರ್ಮ ಪಾಲನೆ ಮಾಡಬೇಕು. ಅಂದರೆ ತನ್ನ ಪ್ರಜೆಗಳ ಕುರಿತಂತೆ ಯಾವುದೇ ರೀತಿಯ ಪಕ್ಷಪಾತ, ವರ್ಣಬೇದ, ಜಾತಿ ಕೋಮು ಬೇಧ ಮಾಡಬಾರದು ಎಂದಿದ್ದಾರೆ. ಆದರೆ ಉತ್ತರ ಪ್ರದೇಶದ ರಾಜ ಹಠಮಾರಿ ಮಗುವಿನಂತೆ ವರ್ತಿಸುತ್ತಿದ್ದಾರೆ ಎಂದು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿಕಾರಿದರು.
ಈ ಹಿಂದೆ ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಬಳಿ ನಡೆದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ಸಿಎಎ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧನಕ್ಕೊಳಗಾಗಿ ಜೈಲಿನಲ್ಲಿದ್ದ ಡಾ. ಕಫೀಲ್ ಖಾನ್‍ಗೆ ಅಲಹಾಬಾದ್ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಡಾ. ಕಫೀಲ್ ಖಾನ್ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯನ್ನು 15 ದಿನಗಳೊಳಗೆ ಇತ್ಯರ್ಥಪಡಿಸಬೇಕೆಂದು ಹೈಕೋರ್ಟ್‍ಗೆ ಸುಪ್ರೀಂಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ಮಂಗಳವಾರ ಜಾಮೀನು ಮಂಜೂರು ಮಾಡಲಾಗಿದೆ. ಕಳೆದ ವರ್ಷ ಡಿಸೆಂಬರ್ 12 ರಂದು ಆಲಿಘರ್ ವಿಶ್ವವಿದ್ಯಾನಿಲಯದ ಬಳಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ವೇಳೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಜನವರಿಯಲ್ಲಿ ಮುಂಬೈಯಲ್ಲಿ ಉತ್ತರ ಪ್ರದೇಶ ಟಾಸ್ಕ್‍ಫೆÇೀರ್ಸ್ ಡಾ. ಕಫೀಲ್ ಖಾನ್ ಅವರನ್ನು ಬಂಧಿಸಿತ್ತು. ಬಳಿಕ ಫೆಬ್ರವರಿ 14ರಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಬರೋಬ್ಬರಿ 8 ತಿಂಗಳ ನಂತರ ಡಾ. ಕಫೀಲ್‍ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. 2017ರಲ್ಲಿ ಗೋರಖ್‍ಪುರ ಆಸ್ಪತ್ರೆಯಲ್ಲಿ 60 ಮಕ್ಕಳು ಸಾವಿಗೀಡಾದ ಬಳಿಕ ಕಫೀಲ್ ಖಾನ್‍ರನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ.
0 comments:
Post a Comment