ಮಂಗಳೂರು, ಸೆ. 19, 2020 (ಕರಾವಳಿ ಟೈಮ್ಸ್) : ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸದೆ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸದ ಸರಕಾರಗಳು ಕೊರೋನಾ ಸಂಕಷ್ಟದ ಸಮಯದಲ್ಲಿ ಬೆತ್ತಲಾಗಿದೆ. ಖಾಸಗಿ ಆಸ್ಪತ್ರೆಗಳು ಬಡವರ ಪಾಲಿಗೆ ಮರಣ ಶಾಸನವಾಗಿದೆ ಎಂದು ಡಿವೈಎಫ್‍ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್‍ಐ ಕಾವೂರು ವಲಯ ಸಮಿತಿ ವತಿಯಿಂದ ಕಾವೂರಿನಲ್ಲಿ ಏರ್ಪಡಿಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರ ಲೂಟಿ ಮಾಡುತ್ತಿದ್ದಾರೆ. ದರಪಟ್ಟಿ ಡಿವೈಎಫ್‍ಐ ಪ್ರಾರಂಭದಿಂದಲೂ ವಿರೋಧಿಸುತ್ತಾ ಬಂದಿದೆ. ಕಳೆದ ಹತ್ತು ವರ್ಷಗಳಿಂದ ಖಾಸಗಿ ಆಸ್ಪತ್ರೆ ನಿಯಂತ್ರಿಸಿ ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಿ ಎಂಬ ಹೋರಾಟ ನಡೆಸುತ್ತಾ ಬಂದಿದ್ದರೂ ರಾಜಕಾರಣಿಗಳ ಖಾಸಗಿ ಪರ ನೀತಿಗಳಿಂದಾಗಿ ಖಾಸಗಿ ಆಸ್ಪತ್ರೆಗಳ ಏಕಸ್ವಾಮ್ಯ ನಡೆಯುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ 3 ಲಕ್ಷದಿಂದ 30 ಲಕ್ಷದವರೆಗೆ ಆಸ್ಪತ್ರೆ ಬಿಲ್‍ಗಳು ಹರಿದಾಡುತ್ತಿವೆ. ಇಷ್ಟು ಮೊತ್ತ ಪಾವತಿಸಿದರೂ ಜೀವ ಉಳಿಸಲಾಗದ ಖಾಸಗಿ ಆಸ್ಪತ್ರೆಗಳು ಹಣಕ್ಕಾಗಿ ಹೆಣ ಕೊಡದೆ ಇರುವ ಸಾಕಷ್ಟು ಪ್ರಕರಣಗಳು ವರದಿಯಾಗುತ್ತಿದೆ ಎಂದು ಆರೋಪಿಸಿದರು.
ಸರಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು. ಜಿಲ್ಲೆಯಲ್ಲಿ ಏಳು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಆದರೆ ವೆನ್‍ಲಾಕ್ ಆಸ್ಪತ್ರೆಗೆ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಯಾಕೆ ಸಾದ್ಯವಿಲ್ಲ ಎಂದು ಪ್ರಶ್ನಿಸಿದರು. ಜಿಲ್ಲೆಯ ಜನಪ್ರತಿನಿಧಿಗಳು ಆದಾರ್ ತೋರಿಸಿದರೆ ಉಚಿತ ಚಿಕಿತ್ಸೆ ಎಂದು ಹೇಳುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವರ ಈ ಮಾತಿಗೆ ಬೆಲೆ ಇಲ್ಲದಂತಾಗಿದೆ. ಆದರೂ ಖಾಸಗಿ ಆಸ್ಪತ್ರೆಗಳ ಲೂಟಿಯ ವಿರುದ್ದ ಮಾತನಾಡದೆ ಜಿಲ್ಲೆಯ ಜನಪ್ರತಿನಿಧಿಗಳು, ಬಿಜೆಪಿ ಖಾಸಗಿ ಲಾಬಿಗೆ ಮಣಿದಿದೆ ಎಂದು ಮುನೀರ್ ಕಾಟಿಪ್ಪಳ್ಳ ಗಂಭೀರವಾಗಿ ಆರೋಪಿಸಿದರು.
ಮಾಜಿ ಕಾಪೆರ್Çರೇಟರ್ ದಯಾನಂದ ಶೆಟ್ಟಿ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ. ಬಿಜೆಪಿ ಸರಕಾರ ಇದನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಜಾತಿ ಧರ್ಮದ ವಿಚಾರದಲ್ಲಿ ಬೀದಿಗೆ ಇಳಿಯುವವರು ಕನಿಷ್ಟ ಹತ್ತು ನಿಮಿಷ ಖಾಸಗಿ ಆಸ್ಪತ್ರೆಗಳ ವಿರುದ್ದ ಮಾತನಾಡುತ್ತಿಲ್ಲ. ಜನಸಾಮಾನ್ಯರ ಗೋಳು ಕೇಳುವವರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್‍ಐ ಮುಖಂಡರಾದ ಶ್ರೀನಾಥ್, ಪ್ರವೀಣ್, ಸುನಂದ, ಸೌಮ್ಯ, ಆಶಾ, ಪ್ರಮೀಳಾ, ಬಶೀರ್, ನೌಶಾದ್, ಖಲೀಲ್, ಚರಣ್, ಸಂತೋಷ್, ನವೀನ್ ಕೊಂಚಾಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment