ಬೆಂಗಳೂರು (ಕರಾವಳಿ ಟೈಮ್ಸ್) : ರಾಜ್ಯ ಬಿಜೆಪಿ ಸರಕಾರ ರೈತ ಪ್ರತಿಭಟನೆಗಳು, ಮಹದಾಯಿ ಹೋರಾಟಗಾರರ ಮೇಲಿನ ಸುಮಾರು 62 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದು, ಹೋರಾಟಗಾರರ ಹೆಸರಲ್ಲಿ ಸರಕಾರ ತನ್ನ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ವಾಪಾಸು ಪಡೆದಿರುವುದು ಇದೀಗ ವ್ಯಾಪಕ ಆಕ್ರೋಶ ಹಾಗು ವಿವಾದಕ್ಕೆ ಕಾರಣವಾಗಿದೆ.
ರೈತರ ಪರ, ಸಾಮಾಜಿಕ ಕಳಕಳಿ ಹಿನ್ನೆಲೆಯ ಪ್ರತಿಭಟನೆ, ಹರತಾಳ ನಡೆಸಿದವರ ಮೇಲಿನ ಪ್ರಕರಣಗಳನ್ನು ವಾಪಸ್ಸು ಪಡೆಯುವುದು ಸಾಮಾನ್ಯ ಸಂಗತಿ. ಆದರೆ ಸಾಮಾಜಿಕ ಕಳಕಳಿ ಹೆಸರಿನಲ್ಲಿ ಸಂಘಟನೆಗಳು, ಪಕ್ಷದ ಕಾರ್ಯಕರ್ತರ ಮೇಲಿರುವ ಪ್ರಕರಣಗಳನ್ನು ವಾಪಾಸು ಪಡೆಯುವ ಮೂಲಕ ಅವರ ಕೃತ್ಯಗಳನ್ನು ಮುಚ್ಚಿ ಹಾಕಲು, ಆ ಮೂಲಕ ಅಂತಹ ಸಂಘಟನೆ ಮತ್ತು ವ್ಯಕ್ತಿಗಳನ್ನು ಸಮರ್ಥಿಸಿಕೊಳ್ಳುವ ಕೆಲಸಕ್ಕೆ ಸರಕಾರ ಬಹಿರಂಗವಾಗಿಯೇ ಕೈ ಹಾಕಿದೆ. ಕಳೆದ ವಾರ ನಡೆದ ಸಂಪುಟ ಸಭೆಯಲ್ಲಿ ಸರಕಾರ 62 ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಾಸು ಪಡೆಯಲು ಅನುಮೋದನೆ ನೀಡಿದೆ.
ಹುಣಸೂರು ವಿದ್ಯಾರ್ಥಿಗಳ ಪ್ರಕರಣ, ಬೆಳಗಾವಿ ನಗರ ಮಾರ್ಕೆಟ್ ಗಲಾಟೆ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದ್ದರೆ, ವೈಯಕ್ತಿಕ ಪ್ರಕರಣಗಳು ಹಾಗೂ ಗಂಭೀರ ಸ್ವರೂಪದ ಮೊಕದ್ದಮೆಗಳನ್ನು ವಾಪಸ್ ಪಡೆದಿಲ್ಲ ಎಂದು ಸರಕಾರ ಸಮಜಾಯಿಶಿ ನೀಡಿತ್ತು. ಆದರೆ ಹೋರಾಟಗಾರರ ಹೆಸರಲ್ಲಿ ಸರಕಾರ ತನ್ನ ಪಕ್ಷದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧದ ಗಂಭೀರ ಸ್ವರೂಪದ ಪ್ರಕರಣಗಳನ್ನೂ ಹಿಂದಕ್ಕೆ ಪಡೆದುಕೊಂಡಿದೆ. ಈ ಬಹುತೇಕ ಕ್ರಿಮಿನಲ್ ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ. ಡಿಜಿ-ಐಜಿಪಿ ಕಚೇರಿ, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ, ಕಾನೂನು ಇಲಾಖೆ ಬಹುತೇಕ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವುದು ಸೂಕ್ತವಲ್ಲ ಎಂಬ ಅಭಿಪ್ರಾಯವ್ಯಕ್ತಡಿಸಿದೆ. ಆದರೆ ಜುಲೈ 22ರಂದು ನಡೆದ ಸಂಪುಟ ಉಪ ಸಮಿತಿ ಸಭೆಯಲ್ಲಿ 62 ಪ್ರಕರಣಗಳನ್ನು ಹಿಂಪಡೆಯುವುದು ಸೂಕ್ತ ಎಂದು ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಅದರಂತೆ ಸಂಪುಟ ಸಭೆ 62 ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳನ್ನು ವಾಪಸು ಪಡೆಯಲು ಅನುಮೋದನೆ ನೀಡಿದೆ.
ಆ. 20 ರಂದು ನಡೆದ ಸಂಪುಟ ಸಭೆಯಲ್ಲಿ ಸರಕಾರ ಒಟ್ಟು 62 ಕ್ರಿಮಿನಲ್ ಪ್ರಕರಣಗಳನ್ನು ವಾಪಾಸು ಪಡೆಯಲು ತೀರ್ಮಾನಿಸಿದೆ. ಹೋರಾಟಗಾರರು, ವಿದ್ಯಾರ್ಥಿ ಗಲಾಟೆ ಹೆಸರಲ್ಲಿ ಪ್ರಕರಣ ವಾಪಾಸು ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಂಪುಟ ಸಭೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಮೇಲಿನ ಪ್ರಕರಣವನ್ನೂ ವಾಪಸು ಪಡೆಯಲು ತೀರ್ಮಾನಿಸಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಡಿ. 3, 2017ರಂದು ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿ ಪ್ರಯುಕ್ತ ರಾಲಿ ನಡೆಸಲು ಯತ್ನಿಸಿದ್ದರು. ನಿಷೇಧಾಜ್ಞೆ ಇದ್ದರೂ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲು ಪ್ರಯತ್ನ ನಡೆಸಿದ್ದರು. ಈ ವೇಳೆ ಸಂಸದ ಪ್ರತಾಪ್ ಸಿಂಹ ಪೆÇಲೀಸರು ಹಾಕಿದ್ದ ಬ್ಯಾರಿಕೇಡ್ ಮೇಲೆ ಕಾರನ್ನು ವೇಗವಾಗಿ ನುಗ್ಗಿಸಿದ ಆರೋಪಕ್ಕೊಳಗಾಗಿದ್ದರು. ಈ ಸಂಬಂಧ ಬಿಳಿಕೆರೆ ಠಾಣೆಯಲ್ಲಿ ಸಂಸದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಸಂಸದ ಪ್ರತಾಪ್ ಸಿಂಹ ವಿರುದ್ಧ ಐಪಿಸಿ 279, 353, 188 ಮತ್ತು 332ರಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಮೊನ್ನೆ ನಡೆದ ಸಂಪುಟ ಸಭೆಯಲ್ಲಿ ಈ ಪ್ರಕರಣಗಳನ್ನು ವಾಪಸು ಪಡೆಯಲಾಗಿದೆ. ಅಲ್ಲದೆ ಹನುಮ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಸಿದ ಹಿನ್ನೆಲೆ ಹುಣಸೂರು ಪಟ್ಟಣ ಠಾಣೆಯಲ್ಲಿ ದಾಖಲಾಗಿರುವ ಬೆಂಬಲಿಗರ ವಿರುದ್ಧದ ಪ್ರಕರಣವನ್ನೂ ವಾಪಸು ಪಡೆಯಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಬೆಂಬಲಿಗರ ವಿರುದ್ಧ ದಾಖಲಾಗಿರುವ ಮೊಕದ್ದಮೆಯನ್ನು ಸರಕಾರ ಹಿಂದಕ್ಕೆ ಪಡೆದಿದೆ. ಫೆ. 6, 20 19ರಂದು ದಾವಣಗೆರೆಯ ಹೊನ್ನಾಳಿ ಪೆÇಲೀಸ್ ಠಾಣೆಯಲ್ಲಿ ಎಂ.ಪಿ. ರೇಣುಕಾಚಾರ್ಯರ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ರೇಣುಕಾಚಾರ್ಯ ಜಯಗಳಿಸಿದ್ದಕ್ಕಾಗಿ ಬಿಜೆಪಿ ಬೆಂಬಲಿಗರು ಹೊನ್ನಾಳಿ ಪಟ್ಟಣದಲ್ಲಿ ಜೈಕಾರ ಹಾಕುತ್ತಾ ಅಕ್ರಮ ಗುಂಪು ಕಟ್ಟಿಕೊಂಡಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ. ಮಂಜಪ್ಪ ಮನೆ ಹತ್ತಿರ ಬೈದಾಡಿಕೊಂಡು ಸುತ್ತಾಡಿದ್ದರು. ಮುಖಂಡರ ಮನೆಯವರೊಂದಿಗೆ ಜಗಳ ಮಾಡಿ, ಹಲ್ಲೆ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಮಂಜಪ್ಪ ಅವರ ಸಹೋದರನ ಅಂಗಡಿ ಮುಂದೆ ಪಟಾಕಿ ಸಿಡಿಸಲು ಹೋಗಿದ್ದರು. ಆ ವೇಳೆ ಅಲ್ಲಿ ಜಗಳವಾಡಿ ಇಬ್ಬರಿಗೆ ಚಾಕು ಇರಿತದ ಆರೋಪವು ಕೇಳಿ ಬಂದಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಹೊನ್ನಾಳಿ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 231/2018 ಕಲಂನಡಿ 143, 144, 147, 148 ಮತ್ತು 504, 307, 323, 324 ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ.
ಸಚಿವ ಬಿ.ಸಿ. ಪಾಟೀಲ್ ಬೆಂಬಲಿಗರ ಮೇಲೆ ಹಾವೇರಿಯ ರಟ್ಟಿಹಳ್ಳಿ ಠಾಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ದೊಂಬಿ ನಡೆಸಿದ ಹಿನ್ನೆಲೆ ದಾಖಲಾದ ಪ್ರಕರಣ ವಾಪಸ್ ಪಡೆಯಲಾಗಿದೆ. ಸರಕಾರಿ ವಾಹನ ಜಖಂ, ಆಸ್ತಿ-ಪಾಸ್ತಿ ನಾಶ, ಅಧಿಕಾರಿಗಳಿಗೆ ಗಾಯ ಮಾಡಿದ ಗಂಭೀರ ಆರೋಪ ಇತ್ತು. ಪ್ರಕರಣ ವಾಪಸು ಪಡೆಯಲು ಸಚಿವರು ಮನವಿ ಮಾಡಿದ್ದರು., ಮೈಸೂರು ಹುಣಸೂರಿನಲ್ಲಿ ಹನುಮ ಜಯಂತಿ ಮೆರವಣಿಗೆ ವೇಳೆ ದಾಂಧಲೆ ನಡೆಸಿ, ಕೋಮು ಗಭೆಗೆ ಪ್ರಚೋದಿಸಿದ ಆರೋಪದಡಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳು ವಾಪಸು ಪಡೆಯಲಾಗಿದೆ. ಧಾರವಾಡ ಬಿಜೆಪಿ ಶಾಸಕ ಅಮೃತ್ ದೇಸಾಯಿ ಬೆಂಬಲಿಗರಿಂದ 2015ರಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿಗಳಿಗೆ ಕಲ್ಲು ತೂರಾಟ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣವನ್ನೂ ಸರಕಾರ ವಾಪಸ್ ಪಡೆದಿದೆ.
ಪೆÇಲೀಸ್ ಇಲಾಖೆ, ಕಾನೂನು ಇಲಾಖೆ ಪ್ರಕರಣ ವಾಪಸ್ ಪಡೆಯಬಾರದೆಂದು ಸೂಚಿಸಿದ್ದರೂ ಸರಕಾರ ಪಕ್ಷ ನಾಯಕರು ಹಾಗೂ ಪಕ್ಷದ ಕಾರ್ಯಕರ್ತರು, ಶಾಸಕರನ್ನು ರಕ್ಷಿಸಲು ಪ್ರಕರಣಗಳನ್ನು ಅಭಿಯೋಜನೆಯಿಂದ ವಾಪಸ್ ಪಡೆದಿದೆ. ರೈತರು, ವಿದ್ಯಾರ್ಥಿಗಳು, ನೀರಿಗಾಗಿ, ವಿದ್ಯುತ್, ಸರಕಾರದ ನಡೆ ಖಂಡಿಸಿ ನಡೆಸುವ ಹೋರಾಟಗಳಿಗೆ ಸೀಮಿತವಾಗಬೇಕಿದ್ದ ಕ್ರಿಮಿನಲ್ ಪ್ರಕರಣಗಳ ವಾಪಸ್ ಪಡೆಯುವ ಪ್ರಕ್ರಿಯೆ, ಪಕ್ಷದ ನಾಯಕರು, ಹಾಗೂ ಸಂಘಟನೆ ಕಾರ್ಯಕರ್ತರನ್ನು ರಕ್ಷಿಸುವ ಉದ್ದೇಶಕ್ಕಾಗಿ ವಾಪಸ್ ಪಡೆಯುತ್ತಿರುವುದು ಆತಂಕವನ್ನುಂಟು ಮಾಡಿದೆ ಎಂಬ ನಿಟ್ಟಿನಲ್ಲಿ ಇದೀಗ ಸರಕಾರದ ಕ್ರಮದ ವಿರುದ್ದ ವ್ಯಾಪಕ ಆಕ್ರೋಶ, ಅಸಮಾಧಾನಗಳು ವ್ಯಕ್ತವಾಗುತ್ತಿದೆ.
0 comments:
Post a Comment