ಸಾಮಾಜಿಕ ಅಂತರ ಮೀರಿದರೆ ಗ್ರಾಹಕರ ಸಹಿತ ಅಂಗಡಿ ಮಾಲಕರಿಗೂ ದಂಡ
ಕೊರೋನಾ ನಿಗ್ರಹಕ್ಕೆ ಕರ್ನಾಟಕ ಸರಕಾರದ ಕಠಿಣ ನಿಯಮ
ಬೆಂಗಳೂರು, ಅಕ್ಟೋಬರ್ 01, 2020 (ಕರಾವಳಿ ಟೈಮ್ಸ್) : ಮಿತಿ ಮೀರುತ್ತಿರುವ ಕೊರೋನಾ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಇನ್ನಷ್ಟು ಕಠಿಣ ನಿಯಮ ಜಾರಿಗೊಳಿಸಿದೆ.
ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಉಲ್ಲಂಘಿಸಿದರೆ ಕಟ್ಟುನಿಟ್ಟನ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಮದುವೆ ಸಮಾರಂಭಕ್ಕೆ 50 ಮಂದಿಗಷ್ಟೇ ಅವಕಾಶ ನೀಡಲಾಗಿದೆ. ಸಭೆ ಸಮಾರಂಭಗಳಲ್ಲೂ 50 ಜನ ಮೀರುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕವಾಗಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಅಂತ್ಯಸಂಸ್ಕಾರದ ಮನೆಯಲ್ಲಿ 20 ಜನರಿಗಷ್ಟೇ ಅನುಮತಿ ನೀಡಲಾಗಿದೆ.
ಮಾಲ್, ಮಾರ್ಕೆಟ್‍ಗಳಲ್ಲೂ ಕೊರೋನಾ ನಿಯಮ ಬಿಗಿಯಾಗಿದ್ದು ಅಂಗಡಿ ಎದುರು ಕನಿಷ್ಠ 6 ಅಡಿ ಅಂತರ ಇರಬೇಕು. ಸಾಮಾಜಿಕ ಅಂತರ ಪಾಲಿಸದಿದ್ರೆ ಗ್ರಾಹಕರಿಗೆ ದಂಡ ಹಾಕಲಾಗುತ್ತದೆ. ಗ್ರಾಹಕರ ಜೊತೆಗೆ ಮಾಲೀಕರಿಗೂ ದಂಡ ಹಾಕಲಾಗುತ್ತದೆ ಎಂದು ಸರಕಾರ ಹೇಳಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6 ಲಕ್ಷದ ಗಡಿ ದಾಟಿದೆ. ಬುಧವಾರ 8,856 ಮಂದಿಗೆ ಸೋಂಕು ತಗುಲಿದ್ದು, 8,890 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,01,767ಕ್ಕೆ ಏರಿಕೆಯಾಗಿದೆ. ಈ ಪೈಕಿ 1,07,616 ಸಕ್ರಿಯ ಪ್ರಕರಣಗಳಿದ್ದು, 821 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ಕೊರೊನಾದಿಂದಾಗಿ ರಾಜ್ಯದಲ್ಲಿ 8,864 ಜನ ಪ್ರಾಣ ಕಳೆದುಕೊಂಡಿದ್ದಾರೆ.
0 comments:
Post a Comment