ಮಂಗಳೂರು ಸೆ. 09, 2020 (ಕರಾವಳಿ ಟೈಮ್ಸ್) : ಸರಕಾರ ಆದಾಯ ತೆರಿಗೆ ಕಛೇರಿಯನ್ನು ಮಂಗಳೂರಿನಿಂದ ಗೋವಾಕ್ಕೆ ಸ್ಥಳಾಂತರ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಶಾಸಕ, ಮಾಜಿ ಸಚಿವ ಯು ಟಿ ಖಾದರ್, ಬಿಜೆಪಿಯ ಜನವಿರೋಧಿ ನೀತಿಗೆ ಕಾಂಗ್ರೆಸ್ ಪ್ರತಿಯೊಂದು ಹಂತದಲ್ಲಿಯೂ ವಿರೋಧಿಸುತ್ತದೆ. ಕರ್ನಾಟಕ ಮಾತ್ರ ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ಸರಕಾರ ಅನ್ಯಾಯ ಮಾಡಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು ಜಿಲ್ಲೆಗೆ ವಿವಿಧ ಯೋಜನೆಗಳನ್ನು ತರಬೇಕು. ಆದರೆ ಬಿಜೆಪಿ ಮಾಡುತ್ತಿರುವುದು ಖಾಸಗೀಕರಣ ಮತ್ತು ವಿವಿಧ ಇಲಾಖೆ, ಸಂಸ್ಥೆಗಳ ಸ್ಥಳಾಂತರ. ಈ ಮೂಲಕ ಜಿಲ್ಲೆಯ ಜನತೆಗೆ ದ್ರೋಹ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಶಾಸಕರು, ಸಂಸದರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕು. ಆದರೆ ಬಿಜೆಪಿ ಪ್ರತಿನಿಧಿಗಳು ಜಿಲ್ಲೆಯ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ ಆರ್ ಲೋಬೋ, ಐವನ್ ಡಿ’ಸೋಜ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಪ್ರಮುಖರಾದ ನವೀನ್ ಡಿ’ಸೋಜಾ, ಟಿ.ಕೆ. ಸುಧೀರ್, ಶಶಿಧರ್ ಹೆಗ್ಡೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment