ಬೆಂಗಳೂರು, ಸೆ. 16, 2020 (ಕರಾವಳಿ ಟೈಮ್ಸ್) : ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮತ್ತು ಹಾಸನ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಸವರಾಜ ಬೊಮ್ಮಾಯಿ, ನಮ್ಮ ಮನೆಯಲ್ಲಿ ಕಾರ್ಯನಿರ್ವಹಿಸುವ ಕೆಲಸದ ಹುಡುಗ£ಗೆ ಕೋವಿಡ್-19 ದೃಢಪಟ್ಟ ಹಿನ್ನಲೆಯಲ್ಲಿ ನಾನು ಕೂಡಾ ಪರೀಕ್ಷೆಗೆ ಒಳಪಟ್ಟಿದ್ದು, ನನಗೂ ಸಹ ಸೋಂಕು ದೃಢಪಟ್ಟಿದೆ. ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಇರುವುದಿಲ್ಲ ಹಾಗೂ ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಅವರು, ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದಿರುವವರು ಕೂಡಲೇ ಪರೀಕ್ಷೆಗೆ ಒಳಪಡುವಂತೆ ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೋರುತ್ತೇನೆ ಎಂದಿದ್ದಾರೆ. ಬಸವರಾಜ್ ಬೊಮ್ಮಾಯಿಯವರು ನಾಳೆ ಸಿಎಂ ಯಡಿಯೂರಪ್ಪ ಅವರ ಜೊತೆ ದೆಹಲಿಗೆ ತೆರಳಬೇಕಿತ್ತು. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ.
ಹಾಸನ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಗೆ ಸೋಂಕು ತಗುಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು ನನ್ನ ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ರೋಗ ಲಕ್ಷಣಗಳಿಲ್ಲದಿದ್ದರೂ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ಆತಂಕಕ್ಕೆ ಕಾರಣ ಇಲ್ಲ. ಕಳೆದ ಕೆಲವು ದಿನಗಳಿಂದ ನನ್ನ ಜೊತೆ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಹಾಗೂ ಕ್ವಾರಂಟೈನ್‍ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.
0 comments:
Post a Comment