ಮುಂಬೈ, ಸೆ. 21, 2020 (ಕರಾವಳಿ ಟೈಮ್ಸ್) : ಮಹಾರಾಷ್ಟ್ರ ರಾಜ್ಯದ ಭೀವಂಡಿ ಎಂಬಲ್ಲಿ ಬಹು ಮಹಡಿ ಕಟ್ಟಡವೊಂದು ಕುಸಿದ ಪರಿಣಾಮ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಾಣಿಜ್ಯ ನಗರಿ ಮುಂಬೈ ಸಮೀಪದಲ್ಲೇ ಇರುವ ಥಾಣೆ ಜಿಲ್ಲೆಯ ಭೀವಂಡಿಯಲ್ಲಿರುವ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ 3 ಮಹಡಿ ಹೊಂದಿದ್ದ ಕಟ್ಟಡ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ. ಸೋಮವಾರ ಬೆಳಗ್ಗಿನ ಜಾವ ಸುಮಾರು 3.30ರ ವೇಳೆಗೆ ಘಟನೆ ನಡೆದಿದ್ದು, 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಬಗ್ಗೆ ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಸಿಬ್ಬಂದಿ ಸ್ಥಳಕ್ಕೆ ಧೌಡಾಯಿಸಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ವಕ್ತಾರರು ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಈ ವರೆಗೂ 10 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಅಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ 5 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 20 ಮಂದಿ ಸಿಲುಕಿರುವ ಸಾಧ್ಯತೆ ಇದ್ದು ಕಾರ್ಯಾಚರಣೆ ಸಾಗಿದೆ ಎಂದು ಮಾಹಿತಿ ನೀಡಿದ್ದಾರೆ.
0 comments:
Post a Comment