ಬೆಳ್ತಂಗಡಿ, ಸೆ. 13, 2020 (ಕರಾವಳಿ ಟೈಮ್ಸ್) : ತಾಲೂಕಿನ ತೆಂಕಕಾರಂದೂರು ಗ್ರಾಮದ ಅರ್ಬಿ ಎಂಬಲ್ಲಿ ಭಾನುವಾರ ಪೂರ್ವಾಹ್ನ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಇಲ್ಲಿಗೆ ಸಮೀಪದ ಗರ್ಡಾಡಿ ನಿವಾಸಿ ಗಿರೀಶ (22) ಎಂಬಾತ ಮೃತಪಟ್ಟಿದ್ದಾನೆ.
ಭಾನುವಾರ ಬೆಳಿಗ್ಗೆ ಸುಮಾರು 11.30 ರ ವೇಳೆಗೆ ಬೆಳ್ತಂಗಡಿ ತಾಲೂಕು ತೆಂಕಕಾರಂದೂರು ಗ್ರಾಮದ ಅರ್ಬಿ ಎಂಬಲ್ಲಿ ನಾರಾವಿ ಕಡೆಯಿಂದ ಗುರುವಾಯನಕೆರೆಯ ಕಡೆಗೆ ತೆರಳುತ್ತಿದ್ದ ಕೆ ಎ 21 ಬಿ 6756 ನೊಂದಣಿ ಸಂಖ್ಯೆಯ ಲಾರಿ ಚಾಲಕನ ದುಡುಕುತನದ ಚಾಲನೆಯಿಂದ ನಾರಾವಿ ಕಡೆಗೆ ತೆರಳುತ್ತಿದ್ದ ಕೆಎ 21 ಡಬ್ಲೂ 5717 ನೊಂದಣಿ ಸಂಖ್ಯೆಯ ಆಕ್ಟಿವಾ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಪಘಾತದ ತೀವ್ರತೆಗೆ ರಸ್ತೆಗೆಸೆಯಲ್ಪಟ್ಟ ಗಿರೀಶನ ತಲೆಗೆ ಗಂಭೀರ ಗಾಯವಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಕಲಂ : 279, ,304 (ಎ) ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment