ಬಂಟ್ವಾಳ, ಸೆ. 08, 2020 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಹಾಗೂ ವೀರಕಂಭ ಗ್ರಾಮಗಳಲ್ಲಿ ಪ್ರತ್ಯೇಕ ಗಾಂಜಾ ಪ್ರಕರಣ ಬೇಧಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಬಿ ಗ್ರಾಮದ ಬಿ ಸಿ ರೋಡು ಸಮೀಪದ ಪರ್ಲಿಯಾ-ಮದ್ದ ಎಂಬಲ್ಲಿನ ನಿವಾಸಿ ಮುಹಮ್ಮದ್ ಎಂಬವರ ಮನೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಗಾಂಜಾ ಮತ್ತಿತರ ಅಮಲು ಪದಾರ್ಥ ವಶಪಡಿಸಿಕೊಂಡಿದ್ದು, ಆರೋಪಿ ಸ್ಥಳೀಯ ನಿವಾಸಿ ಅಹಮದ್ ಸಾಬಿತ್ (30) ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ.
ಮದ್ದ ಎಂಬಲ್ಲಿ ಮಹಮ್ಮದ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಈ ಪೊಲೀಸ್ ದಾಳಿ ನಡೆದಿದೆ. ದಾಳಿ ವೇಳೆ ಮನೆಯಲ್ಲಿ ಎರಡು ಪಾಲಿಥೀನ್ ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಅರ್ಧ ಒಣಗಿದ ಮಾದಕ ಗಾಂಜಾ ಗಿಡಗಳ ಮೊಗ್ಗುಗಳು, ಎಲೆ, ಕಡ್ಡಿಗಳು ಸೇರಿದಂತೆ 19,97,400/- ರೂಪಾಯಿ ಮೌಲ್ಯದ 39 ಕೆ ಜಿ 948 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮತ್ತೋರ್ವ ಆರೋಪಿ ಮಹಮ್ಮದ್ ಅನ್ಸಾರ್ ಎಂಬಾತ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ : 8 (ಸಿ), 20 (ಬಿ)(11) (ಸಿ) ಎನ್ ಡಿ ಪಿ ಎಸ್ ಆಕ್ಟ್ 1985 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಟ್ಲದಲ್ಲಿ ಡಿಸಿಐಬಿ ಪೊಲೀಸರ ಕಾರ್ಯಾಚರಣೆ
ವಿಟ್ಲ ಸಮೀಪದ ವೀರಕಂಭ ಗ್ರಾಮದ ಬೆಂಜಂತಿಮಾರ್ ಕ್ರಾಸ್ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಅಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ಪ್ರಕರಣ ಬೇಧಿಸಿದ ಡಿಸಿಐಬಿ ಪೊಲೀಸರು ಗಾಂಜಾ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಮೂಲತಃ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಪಾಡಿ ಇಂಜಿನಿಯರಿಂಗ್ ಕಾಲೇಜು ಬಳಿ ನಿವಾಸಿ, ಪ್ರಸ್ತುತ ಬಿ ಸಿ ರೋಡು ಸಮೀಪದ ಕೈಕಂಬ ಎಂಬಲ್ಲಿ ವಾಸ್ತವ್ಯ ಇರುವ ಮಹಮ್ಮದ್ ಅಸ್ರು ಅಲಿಯಾಸ್ ಮಹಮ್ಮದ್ ಆಲಿ (28) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ ಒಟ್ಟು 880 ಗ್ರಾಂ ಗಾಂಜಾ, ಒಂದು ಆಟೋ ರಿಕ್ಷಾ, ಮೊಬೈಲ್ ಹಾಗೂ ನಗದು 150 ರೂಪಾಯಿ ಸೇರಿದಂತೆ ಸುಮಾರು 98,550/- ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 8(ಸಿ) ಜೊತೆಗೆ 20(ಬಿ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.
0 comments:
Post a Comment