ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಹೃದಯ ಪಟ್ಟಣವಾಗಿರುವ ಬಿ ಸಿ ರೋಡು ಕಳೆದ ಹಲವು ವರ್ಷಗಳಿಂದ ಸೂಕ್ತ ವ್ಯವಸ್ಥೆಗಳಿಲ್ಲದೆ ಅವ್ಯವಸ್ಥೆಯ ಆಗರವಾಗಿರುವ ಬಗ್ಗೆ ಮನಗಂಡ ಶಾಸಕ ಯು ರಾಜೇಶ್ ನಾಯಕ್ ಅವರು ಬಿ ಸಿ ರೋಡು ನಗರ ಸುಂದರೀಕರಣ ಯೋಜನೆಗೆ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ರೂಪುರೇಷೆ ಸಿದ್ದಪಡಿಸಿ ಶಿಲಾನ್ಯಾಸ ನಡೆಸಿದ್ದರು. ರಾಜ್ಯ ಸರಕಾರದ 5 ಕೋಟಿ ಅನುದಾನ ಸಹಿತ ವಿವಿಧ ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಸುಮಾರು 20 ಕೋಟಿ ರೂಪಾಯಿ ಅಂದಾಜು ವೆಚ್ಚದ ಈ ಕಾಮಗಾರಿಗೆ ಸಚಿವರಾದ ಆರ್ ಅಶೋಕ್ ಹಾಗೂ ಕೋಟಾ ಶ್ರೀನಿವಾಸ ಪೂಜಾರಿ ಅವರು ಬಿ ಸಿ ರೋಡಿನ ಫ್ಲೈ ಓವರ್ ಅಡಿಭಾಗದಲ್ಲಿ ಈ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
ಆದರೆ ಈ ಬಳಿಕ ವಿವಿಧ ತಾಂತ್ರಿಕ ಹಾಗೂ ಇನ್ನಿತರ ಕಾರಣಗಳಿಂದ ಈ ಯೋಜನೆಗೆ ಯಾವುದೇ ವೇಗ ಸಿಗದೆ ವರ್ಷಪೂರ್ತಿಯಾಗುತ್ತಾ ಬಂದಿತ್ತು. ಬಿ ಸಿ ರೋಡಿನ ಅವ್ಯವಸ್ಥೆಯೂ ಯಥಾ ಸ್ಥಿತಿ ಮುಂದುವರಿದಿತ್ತು. ಈ ಬಗ್ಗೆ ಜನ ವಿವಿಧ ರೀತಿಯಲ್ಲಿ ಟ್ರೊಲ್ ಕೂಡಾ ಮಾಡಲಾರಂಭಿಸಿದ್ದರು. ಇದೀಗ ಕೊನೆಗೂ ಬಿ ಸಿ ರೋಡು ಸುಂದರೀಕರಣ ಕಾಮಗಾರಿಗೆ ಕಾಲ ಕೂಡಿ ಬಂದಿದ್ದು, ಕಳೆದ ಎರಡು ದಿನಗಳಿಂದ ಇಲ್ಲಿನ ಫ್ಲೈ ಓವರ್ ಅಡಿಭಾಗದಲ್ಲಿ ಜೆಸಿಬಿ ಬಳಸಿ ಅಗೆತ ಕಾಮಗಾರಿ ನಡೆಯುತ್ತಿದೆ. ಆರಂಭದಲ್ಲಿ ಫ್ಲೈ ಓವರ್ ಅಡಿಭಾಗದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣ ನಡೆಯಲಿದ್ದು, ಬಳಿಕ ಬಿ ಸಿ ರೋಡಿನ ಫ್ಲೈ ಓವರ್ ಅಡಿಭಾಗದುದ್ದಕ್ಕೂ ಇಂಟರ್‍ಲಾಕ್ ಅಳವಡಿಸುವ ಕಾಮಗಾರಿ ಸಹಿತ ವಿವಿಧ ಕಾಮಗಾರಿಗಳು ಸಾಗಲಿದೆ ಎಂದು ತಿಳಿದು ಬಂದಿದೆ.
0 comments:
Post a Comment