ನವದೆಹಲಿ, ಸೆ. 10, 2020 (ಕರಾವಳಿ ಟೈಮ್ಸ್) : ರಾಮ ಮಂದಿರ ನಿರ್ಮಾಣಕ್ಕಾಗಿ ಹಣ ಸಂಗ್ರಹಿಸಲು ಉದ್ದೇಶಿಸಿರುವ ಶ್ರೀ ರಾಮ್ ಜನ್ಮ ಭೂಮಿ ತೀರ್ಥ ಕ್ಷೇತ್ರಟ್ರಸ್ಟ್ ಉಳಿತಾಯ ಖಾತೆಗಳಿಂದ 6 ಲಕ್ಷ ರೂಪಾಯಿಗಳನ್ನು ವಂಚಕರು ಬುಧವಾರ ಡ್ರಾ ಮಾಡಿದ್ದಾರೆ.
ಟ್ರಸ್ಟ್ ಅಯೋಧ್ಯೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಗಳನ್ನು ಹೊಂದಿದೆ. ವಂಚನೆ ಬಗ್ಗೆ ಮಾಹಿತಿ ತಿಳಿದಾಗ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಯೋಧ್ಯೆಯ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ಚೆಕ್ ಬಳಸಿ ಟ್ರಸ್ಟ್‌ನ ಬ್ಯಾಂಕ್ ಖಾತೆಯಿಂದ 6 ಲಕ್ಷ ರೂಪಾಯಿ ವಂಚಿಸಿರುವುದಾಗಿ ಬುಧವಾರ ತಡರಾತ್ರಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ಐಟಿ ಸೆಲ್‌ನ ಎರಡು ತಂಡಗಳನ್ನು ರಚಿಸಿದ್ದಾರೆ. ಲಖನೌ ಎಸ್‌ಬಿಐ ಶಾಖೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪೊಲೀಸ್ ತಂಡಗಳು ಪರಿಶೀಲಿಸುತ್ತಿದ್ದು ಅಲ್ಲಿಂದ ಹಣ ವರ್ಗಾವಣೆಯಾಗಿರುವುದು ತಿಳಿದು ಬಂದಿದೆ. ಉತ್ತರ ಪ್ರದೇಶ ಪೊಲೀಸರ ಸೈಬರ್ ಅಪರಾಧ ತಜ್ಞರು ಬ್ಯಾಂಕ್ ಖಾತೆಯ ವಂಚನೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಮೂಲಗಳ ಪ್ರಕಾರ, ನಕಲಿ ಚೆಕ್ ಬಳಸಿ ನಡೆಸಿದ ಎರಡು ವ್ಯವಹಾರಗಳಲ್ಲಿ ಕ್ರಮವಾಗಿ 2.5 ಲಕ್ಷ ರೂಪಾಯಿ ಮತ್ತು 3.5 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಲಖನೌ ಶಾಖೆಯಲ್ಲಿ 9.86 ಲಕ್ಷ ರೂಪಾಯಿಗಳ ಮತ್ತೊಂದು ಚೆಕ್ ಸಲ್ಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ.
39200 235 062 ಅಕೌಂಟ್ ಸಂಖ್ಯೆ ಹೊಂದಿರುವ ಖಾತೆಯನ್ನು ಟ್ರಸ್ಟ್ ಅಯೋಧ್ಯೆಯ ಎಸ್‌ಬಿಐನ ನಯಾ ಘಾಟ್ ಶಾಖೆಯಲ್ಲಿ ತೆರೆದಿತ್ತು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಇನ್ನೊಬ್ಬ ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರು ಖಾತೆಗೆ ಜಂಟಿಯಾಗಿ ಸಹಿ ಮಾಡಿದ್ದಾರೆ.
ಮೊದಲ ವಹಿವಾಟಿನ ಅಡಿಯಲ್ಲಿ, ಸೆಪ್ಟೆಂಬರ್ 1 ರಂದು ಚೆಕ್ ಸಂಖ್ಯೆ 740799 ನಲ್ಲಿ 2.50 ಲಕ್ಷ ರೂಪಾಯಿಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ವರ್ಗಾಯಿಸಲಾಯಿತು. 3.50 ಲಕ್ಷ ರೂಪಾಯಿಗೆ ಸಂಬಂಧಿಸಿದ ಎರಡನೇ ವಹಿವಾಟನ್ನು ಚೆಕ್ ಸಂಖ್ಯೆ 740 800 ಮೂಲಕ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸೆಪ್ಟೆಂಬರ್ 8 ರಂದು ವರ್ಗಾಯಿಸಲಾಗಿದೆ.
ವಂಚಕರು ಚೆಕ್ ಸಂಖ್ಯೆ 740798 ಮೂಲಕ 9.86 ಲಕ್ಷ ರೂಪಾಯಿಗಳ ಮತ್ತೊಂದು ವಹಿವಾಟನ್ನು ನಡೆಸಲು ಯತ್ನಿಸಿದಾಗ ಬ್ಯಾಂಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಕರೆದು ಚೆಕ್ ವಿವರಗಳನ್ನು ತಿಳಿಸಿ ಮತ್ತು ಪಾವತಿಗಳನ್ನು ವರ್ಗಾಯಿಸಬೇಕೆ? ಎಂದು ಪ್ರಶ್ನಿಸಿದೆ. ಟ್ರಸ್ಟ್ ಮೂಲಗಳ ಪ್ರಕಾರ, ರಾಯ ಚೆಕ್ ಗಳ ಪರಿಶೀಲನೆ ನಡೆಸಿದಾಗ ಅವರು ಮೇಲೆ ತಿಳಿಸಿದ ಸಂಖ್ಯೆಗಳೊಂದಿಗೆ ಎಲ್ಲಾ ಮೂಲ ಚೆಕ್ ಗಳನ್ನು ಹೊಂದಿದ್ದರು. ವಂಚಕರು ಹಣವನ್ನು ಹಿಂಪಡೆಯಲು ನಕಲಿ ಚೆಕ್ ಸೃಷ್ಟಿ ಮಾಡಿದ್ದಾರೆ ಎಂದು ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳು ಊಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಅಯೋಧ್ಯೆ ಡಿಐಜಿ ದೀಪಕ್ ಕುಮಾರ್ ಹೇಳಿದ್ದಾರೆ.
0 comments:
Post a Comment