ಆಳುವ ವರ್ಗದ ಕಾವಲು ನಾಯಿಯಾಗಿ ಸ್ವತಂತ್ರ ಕಾರ್ಯನಿರ್ವಹಣೆ ಮಾಡುವ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಅಭಿವ್ಯಕ್ತಿಗೆ ಅಡ್ಡಿಪಡಿಸುವುದು ಅತ್ಯಂತ ಆತಂಕಕಾರಿ ಬೆಳವಣಿಗೆ
ಬೆಂಗಳೂರು, ಸೆ. 30, 2020 (ಕರಾವಳಿ ಟೈಮ್ಸ್) : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತೇಕ ವ್ಯವಸ್ಥೆಗಳು ಮೌಲ್ಯಗಳನ್ನು ಕಳೆದುಕೊಂಡಿದ್ದರೂ ನ್ಯಾಯಾಂಗ ವ್ಯವಸ್ಥೆ ಹಾಗೂ ಪತ್ರಿಕಾ ರಂಗ ಇಂದಿಗೂ ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಂಡಿರುವುದರಿಂದಲೇ ಸಮಾಜದಲ್ಲಿ ಗಬ್ಬೆದ್ದು ನಾರುತ್ತಿರುವ ಅವ್ಯವಸ್ಥೆಗಳು ಜನಸಾಮಾನ್ಯರ ಮುಂದೆ ಬಟಾ ಬಯಲಾಗುತ್ತಿದೆ. ಅಲ್ಲದೆ ಸಾಮಾನ್ಯ ಜನರೂ ಕೂಡಾ ಒಂದಷ್ಟು ನ್ಯಾಯವನ್ನು ಪಡೆದುಕೊಳ್ಳುತ್ತಿದ್ದಾರೆ.
ನೈತಿಕತೆ, ಮೌಲ್ಯ ಎಲ್ಲವನ್ನೂ ಕಳೆದುಕೊಂಡು ಕೇವಲ ಹಣ, ಅಧಿಕಾರ, ಅಂತಸ್ತುಗಳ ಹಿಂದೆ ನಾಗಾಲೋಟ ಕಿತ್ತಿರುವ ರಾಜಕೀಯ, ಆಡಳಿತ ವ್ಯವಸ್ಥೆಗಳು ಕಾಲ ಕಾಲಕ್ಕೆ ನ್ಯಾಯಾಂಗ ಹಾಗೂ ಮಾಧ್ಯ,ಮ ರಂಗವನ್ನು ತಮ್ಮ ಅಣತಿಯ ಮೇರೆಗೆ ಕುಣಿಸಿಕೊಳ್ಳಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಯಶಸ್ವಿಯಾಗುತ್ತಿಲ. ಮಾಧ್ಯಮ ರಂಗ ಹಾಗೂ ಪತ್ರಕರ್ತರು ಇಂದಿಗೂ ಜಾತಿ, ಧರ್ಮ, ಪಕ್ಷ, ಸಮುದಾಯ ಎಲ್ಲದಕ್ಕೂ ಅತೀತವಾಗಿ ತಮ್ಮ ನಿಷ್ಠುರ ರೀತಿಯ ಕಾರ್ಯನಿರ್ವಹಣೆಯನ್ನು ಮಾಡುತ್ತಿರುವುದರಿಂದ ಇಂದು ಸಮಾಜ ಬದಲಾವಣೆ ಆಗುತ್ತಿದೆ ಎಂದರೆ ತಪ್ಪಿಲ್ಲ.
ರಾಜಕೀಯ ಹಾಗೂ ಸಮಾಜದಲ್ಲಿ ಎಷ್ಟೇ ಪ್ರಭಾವಿಯಾಗಿದ್ದರೂ ಜನಸಾಮಾನ್ಯರನ್ನು ಶೋಷಣೆ ನಡೆಸುವ ಕಂಡು ಬಂದ ತಕ್ಷಣ ಮಧ್ಯಪ್ರವೇಶಿಸುವ ಮಾಧ್ಯಮ ರಂಗ ಅಂತಹ ವ್ಯಕ್ತಿತ್ವಗಳ ಎಲ್ಲವನ್ನೂ ಬಯಲಿಗೆಳೆಯುವ ಮೂಲಕ ನೊಂದ ಮನಸ್ಸುಗಳಿಗೆ ಸಾಂತ್ವನದ ಸಿಂಚನಗೈಯುತ್ತಿರುವುದು ಮಾತ್ರ ಇಂದಿನ ಅಸ್ತವ್ಯಸ್ತಗೊಂಡಿರುವ ಸಮಾಜದಲ್ಲಿ ಉಳಿದಿರುವ ಏಕೈಕ ಸಮಾಧಾನಕರ ಸಂಗತಿಯಾಗಿ ಕಂಡು ಬರುತ್ತಿದೆ. ತಮ್ಮೊಳಗಿನ ಹುಳುಕುಗಳನ್ನು ಯಥಾವತ್ ಆಗಿ ಸಮಾಜದ ಮುಂದಿಡುವ ಮಾಧ್ಯಮಗಳ ದಿಟ್ಟತನದ ವಿರುದ್ದ ಅದೆಷ್ಟೋ ಪ್ರಭಾವಿಗಳು ತಮ್ಮೆಲ್ಲಾ ಪ್ರಭಾವಗಳನ್ನು ಬಳಸಿಕೊಂಡು ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಇನ್ನಿಲ್ಲದ ಪ್ರಯತ್ನ ಪಟ್ಟರೂ ಇದುವರೆಗೂ ಯಾವುದೂ ಯಶಸ್ವಿಯಾಗಿಲ್ಲ ಎಂಬುದಕ್ಕೆ ಹಲವು ಪ್ರಕರಣಗಳೇ ಸಾಕ್ಷಿಯಾಗಿವೆ. ಅವ್ಯವಸ್ಥೆಯ ವಿರುದ್ದ ಸಿಡಿದು ನಿಲ್ಲುವ ಮಾಧ್ಯಮ ಮಂದಿಗಳು ಇನ್ನಿಲ್ಲದ ತೊಂದರೆಗಳನ್ನು ಅನುಭವಿಸುವುದಂತೂ ಸತ್ಯ. ಆದರೆ ಪ್ರಕರಣಗಳು ವಿವಿಧ ನ್ಯಾಯಾಲಯಗಳ ಮೆಟ್ಟಿಲೇರಿ ಕೊನೆಗೆ ದೇಶದ ಸರ್ವೋಚ್ಚ ನ್ಯಾಯಾಲಯಗಳ ಬಳಿ ತಲುಪಿದರೂ ಕೊನೆಗೊಮ್ಮೆ ಪ್ರಭಾವಿಗಳು ಮಂಡಿಯೂರಿದ ಪ್ರಕರಣಗಳೇ ನಮ್ಮ ಮುಂದೆ ಹಲವು ಬಾರಿ ಅನಾವರಣಗೊಂಡಿರುವುದು ಇಂದಿನ ಆಡಳಿತ, ಅಧಿಕಾರ ಮದ ಹೊಂದಿರುವ ಮಂದಿಗಳಿಗೆ ಪಾಠವಾಗದಿರುವುದು ಮಾತ್ರ ದುರಂತ, ವಿಪರ್ಯಾಸ.
ರಾಜಕೀಯ ಎಂದಾಗ ಆರೋಪ, ಪ್ರತ್ಯಾರೋಪ ಮೊದಲಾದವುಗಳಿಗೆ ತಮ್ಮನ್ನು ತಾವು ಮೊದಲೇ ಒಗ್ಗಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ರಾಜಕೀಯದಲ್ಲಿ ಆಡಳಿತ ಪಕ್ಷಗಳು, ವಿರೋಧ ಪಕ್ಷಗಳು ಸಹಜ ಅಂಗವಾಗಿದೆ. ಇಂತಹ ಸಂದರ್ಭದಲ್ಲಿ ಅಧಿಕಾರ ನಡೆಸುತ್ತಿರುವ ಮಂದಿಗಳ ಸಕಲ ಚಲನ ವಲನಗಳ ಬಗ್ಗೆ ವಿರೊಧ ಪಕ್ಷಗಳು ಹಾಗೂ ಆಡಳಿತ ಪಕ್ಷದ ಕಾವಲು ನಾಯಿಗಳೆಂದೇ ಹೆಸರು ಪಡೆದಿರುವ ಮಾಧ್ಯಮಗಳೂ ಕೂಡಾ ಹದ್ದಿನ ಕಣ್ಣಿನ ಮೂಲಕ ನಿರಂತರ ವಿಮರ್ಶಿಸುತ್ತಲೇ ಇರುತ್ತದೆ. ಆದರೆ ತಮ್ಮಲ್ಲಿರುವ ತಪ್ಪು, ಆರೋಪಗಳ ವಿಮರ್ಶೆ ಆಗುವ ಸಂದರ್ಭ ತಮ್ಮ ಸಾಚಾತನ ಸಾಬೀತುಪಡಿಸಲು ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ನ್ಯಾಯಯುತ ಮಾರ್ಗಗಳೂ ಇದ್ದೇ ಇರುತ್ತದೆ. ಅವುಗಳನ್ನು ಬಳಸಿಕೊಂಡು ತಮ್ಮ ಸಾಚಾತನ ನಿರೂಪಿಸಬೇಕೇ ಹೊರತು ಅಧಿಕಾರದ ಅಮಲಿನಲ್ಲಿ ಅಧೀನ ವ್ಯವಸ್ಥೆಗಳನ್ನು ಬಳಸಿಕೊಂಡು ಬಲಪ್ರಯೋಗಿಸಿ ಚಿವುಟಿ ಹಾಕುವ ಪ್ರಯತ್ನ ನಡೆಸುವುದು ತಮ್ಮ ಅಧಮತನಕ್ಕೆ ಸಾಕ್ಷಿಯಾಗುತ್ತದೆಯೇ ಹೊರತು ಖಂಡಿತವಾಗಿಯೂ ಅದು ರಾಜಕೀಯ ಮುತ್ಸದ್ದಿತನ ಅಥವಾ ಮೇಧಾವಿತನ ಆಗುವುದಿಲ್ಲ.
ಇದೀಗ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಷ್ಟೆಲ್ಲ ಹೇಳಬೇಕಾಗಿರುವುದು ಅನಿವಾರ್ಯವಾಗಿದೆ. ಅಧಿಕಾರದಲ್ಲಿರುವವರ ಬಗ್ಗೆ ವಿರೋಧಾಭಾಸದ ಸುದ್ದಿ ಪ್ರಕಟಗೊಂಡಿದೆ ಎಂಬ ಒಂದೇ ಒಂದು ಕಾರಣಕ್ಕೆ ರಾತ್ರೋ ರಾತ್ರಿ ಪೊಲೀಸರನ್ನು ಕಳಿಸಿ ವಾಹಿನಿಯ ಕಛೇರಿ ಒಳಗಿರುವ ಎಲ್ಲ ಸಿಸ್ಟಂಗಳ ಹಾರ್ಡ್ ಡಿಸ್ಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಲ್ಲದೆ ಅವುಗಳನ್ನು ಪರಿಶೀಲಿಸಿ ತನಿಖೆ ಕೈಗೊಳ್ಳುವುದಕ್ಕಿಂತಲೂ ಮುನ್ನವೇ ಸರ್ವಸ್ ಸಿಸ್ಟಂನ್ನು ಕೂಡಾ ವಶಪಡಿಸಿಕೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸುದ್ದಿ ವಾಹಿನಿಯೊಂದರ ಪ್ರಸಾರವನ್ನೇ ಸಂಪೂರ್ಣ ಸ್ಥಗಿತಗೊಳ್ಳುವಂತೆ ಮಾಡಿದ್ದಲ್ಲದೆ ಸಮಾಜಕ್ಕಾಗಿ, ಸಮಾಜದ ಒಳಿತಿಗಾಗಿ, ಸಮಾಜದ ಅವ್ಯವಸ್ಥೆಗಳ ವಿರುದ್ದ ಹಲವು ವಿಧ ವಿಘ್ನಗಳನ್ನು ಎದುರಿಸಿ ತೊಡೆ ತಟ್ಟಿ ಹೋರಾಟ ನಡೆಸುತ್ತಿರುವ ಸಾಮಾಜಿಕ ಸ್ವಾಸ್ಥ್ಯ ಯೋಧರಾಗಿ ದುಡಿಯುತ್ತಿರುವ, ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನಗಳನ್ನು ಹೊಂದಿ ಇನ್ನೊಬ್ಬರ ಶಾಂತಿ-ಸಮಾಧಾನ, ನೆಮ್ಮದಿಗಾಗಿ ಬದುಕುತ್ತಿರುವ ನೂರಾರು ಮಂದಿ ಯೋಧರನ್ನು ರಾತೋರಾತ್ರಿ ಅನಾಥರಾಗುವಂತೆ ಮಾಡುವ ಸರ್ವಾಧಿಕಾರಿ ಧೋರಣೆಗೆ ಕೇವಲ ಮಾಧ್ಯಮ ರಂಗ ಮಾತ್ರವಲ್ಲದೆ ಸಮಾಜದ ಸ್ವಾಸ್ಥ್ಯ ಬಯಸುವ ಪ್ರತಿಯೊಬ್ಬರೂ ಖಂಡಿಸಲೇಬೇಕಾಗಿದೆ. ಖಂಡಿಸಲೇಬೇಕು. ಎಂತದ್ದೇ ವ್ಯವಸ್ಥೆಗಳಿದ್ದರೂ ಅದೆಲ್ಲವನ್ನೂ ನ್ಯಾಯಯುತವಾಗಿ ಎದುರಿಸಬೇಕೇ ಹೊರತು ಬಲಪ್ರಯೋಗದಿಂದ ಖಂಡಿತ ಅಲ್ಲ ಎಂಬ ಕನಿಷ್ಠ ಪ್ರಜ್ಞೆ ಅಧಿಕಾರ ನಡೆಸುವ ಮಂದಿಗೆ ಇರಲೇಬೇಕು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಮಾಡಿದ್ದಾರೆ ಎನ್ನಲಾದ ಭ್ರಷ್ಟಾಚಾರದ ಬಗ್ಗೆ ವರದಿ ಮಾಡಿದ್ದ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿಯನ್ನು ಬಂದ್ ಮಾಡಿರುವುದಕ್ಕೆ ವಾಹಿನಿಯ ಪ್ರಿನ್ಸಿಪಲ್ ಎಡಿಟರ್ ರೆಹಮಾನ್ ಹಾಸನ್ ಅವರು ಸುದ್ದಿ ವಾಹಿನಿಯ ಪರದೆಯ ಮೇಲೆಯೂ ಕನಿಷ್ಠ ಅಭಿಪ್ರಾಯ ಹಂಚಿಕೊಳ್ಳಲಾಗದೆ ರಾತೋರಾತ್ರಿ ಫೇಸ್‍ಬುಕ್ ಲೈವ್‍ನಲ್ಲಿ ಬಂದು ಭಾನವಾತ್ಮಕವಾಗಿ ಮಾತನಾಡುತ್ತಾರೆ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೇರುಘಟ್ಟವನ್ನು ಏರಿ ನಿಂತಿರುವ ಮಾಧ್ಯಮ ಲೋಕಕ್ಕೆ ರಾಜಕೀಯ ಕಾರಣಕ್ಕಾಗಿ ಬಂದಿರುವ ಅತ್ಯಂತ ಆತಂಕಕಾರಿ ಸನ್ನಿವೇಶವನ್ನು ಊಹಿಸಲೂ ಸಾಧ್ಯವಾಗದಂತಹ ಪರಿಸ್ಥಿತಿ ಬಂದೊದಗಿದೆ.
ಫೇಸ್‍ಬುಕ್ ಲೈವ್ ಮೂಲಕ ಮಾತನಾಡಿರುವ ವಾಹಿನಿ ನಿರೂಪಕ ರಹಮಾನ್ ಅವರು ಪವರ್ ಟಿವಿ ಮೇಲೆ ಸಿಸಿಬಿ ಪೆÇಲೀಸರು ರೇಡ್ ಮಾಡಿದ್ದಾರೆ. ಅವರಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದಿದ್ದಾರೆ. ಚಾನಲ್ ಬಂದ್ ಮಾಡಿದ್ದು ನಮ್ಮ ಫೇಸ್ ಬುಕ್ ಲೈವನ್ನು ಬಂದ್ ಮಾಡಿದ್ದಾರೆ. ಇದರಿಂದ 250ಕ್ಕೂ ಉದ್ಯೋಗಿಗಳ ಕುಟುಂಬ ಬೀದಿಗೆ ಬಂದಿವೆ ಎಂದು ಹೇಳಿಕೊಂಡಿರುವುದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಪ್ರತಿಯೊಬ್ಬರಿಗೂ ವಿಷಯದ ಗಂಭೀರತೆ ಅರ್ಥವಾಗಲೇಬೇಕು.
ಪವರ್ ಟಿವಿ ವಾಹಿನಿ ಲೈವ್ ಬಂದ್ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮುಖ್ಯಮಂತ್ರಿಗೆ ಪತ್ರ ಬರೆದು ಮನವರಿಕೆ ಮಾಡಿದ್ದಾರೆ. ಟಿವಿ ಮಾಲೀಕರ ಮೇಲೆ ಆರೋಪ ಬೇರೆ ವಿಚಾರ. ಈ ಬಗ್ಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ. ಆದರೆ, ಒಂದು ಟಿವಿ ವಾಹಿನಿ ಲೈವ್ ಬಂದ್ ಮಾಡುವುರಿಂದ ಅದನ್ನು ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತರ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ತಾವು ಈ ಕೂಡಲೇ ಗೃಹ ಸಚಿವರಿಗೆ ನಿರ್ದೇಶನ ನೀಡಿ, ಪವರ್ ಟಿವಿ ವಾಹಿನಿ ಲೈವ್ ಬಂದ್ ತೆರವು ಮಾಡಿಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಶಿವಾನಂದ ತಗಡೂರು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ರೀತಿ ರಾಜ್ಯಾದ್ಯಂತ ಅಸ್ತಿತ್ವ ಸಾರಿರುವ ವಿವಿಧ ಪತ್ರಕರ್ತರ ಸಂಘಗಳು ಈ ಬಗ್ಗೆ ತಮ್ಮ ಬದ್ದತೆಯನ್ನು ಗಟ್ಟಿಯಾಗಿ ಪ್ರದರ್ಶಿಸಬೇಕು. ಇದಕ್ಕೂ ಮಿಗಿಲಾಗಿ ಆಡಳಿತ ಪಕ್ಷದ ಹುಳುಕುಗಳನ್ನು ಬಯಲಿಗೆಳೆಯಲು ಸದಾ ಸಮಯ ಮಾಧ್ಯಮಗಳ ಮುಂದೆ ಟೀವಿ ಕ್ಯಾಮೆರಾಗಳ ಮುಂದೆ ಬಂದು ಅಭಿಪ್ರಾಯ ಹಂಚಿಕೊಂಡು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವ ವಿರೋಧ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಒದಗಿ ಬಂದಿರುವ ಇಂತಹ ಒಂದು ಕಠಿಣ ಸಂದರ್ಭದಲ್ಲಿ ತಮ್ಮ ಗಟ್ಟಿ ಧ್ವನಿಯನ್ನು ಹೊರಹೊಮ್ಮಬೇಕಾದ ಅತ್ಯಂತ ಜರೂರು ಅನಿವಾರ್ಯತೆ ಇದೆ.
0 comments:
Post a Comment