29 ಎಸೆತದಲ್ಲಿ 50 ರನ್ ಗಳಿಸಿದ ಸಿಡಿಸಿದ ಎಬಿ ಡೆವಿಲಿಯರ್ಸ್
ಮೊದಲ ಐಪಿಎಲ್ ಪಂದ್ಯದಲ್ಲೇ ಮಿಂಚಿದ ದೇವದತ್ ಪಡಿಕ್ಕಲ್ ಅಪರೂಪದ ಸಾಧನೆ
ಪಂದ್ಯದ ಗತಿ ಬದಲಿಸಿದ ಯಜುವೇಂದ್ರ ಚಹಲ್ ಗೆ ಪಂದ್ಯ ಪುರುಷೋತ್ತಮ ಗೌರವ
ದುಬೈ, ಸೆ. 22, 2020 (ಕರಾವಳಿ ಟೈಮ್ಸ) : ಆಲ್ ರೌಂಡರ್ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದುಬೈ ಐಪಿಎಲ್ ಕ್ರೀಡಾಕೂಟದ ತನ್ನ ಆರಂಭಿಕ ಪಂದ್ಯದಲ್ಲಿ ಸೋಮವಾರ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 10 ರನ್‍ಗಳ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಟಾಸ್ ಜಯಿಸಿದ ಹೈದರಾಬಾದ್ ತಂಡದ ನಾಯಕ ಮೊದಲು ಬ್ಯಾಟಿಂಗ್ ನಡೆಸುವ ಅವಕಾಶವನ್ನು ಬೆಂಗಳೂರು ತಂಡಕ್ಕೆ ನೀಡಿದರು. ಪಾಳಿಯನ್ನು ಆರಂಭಿಸಿದ ಬೆಂಗಳೂರು ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ ಅವರ ಆಕರ್ಷಕ 56 ರನ್ ಮತ್ತು ಎಬಿ ಡಿವಿಲಿಯರ್ಸ್ ಅವರ ಸ್ಫೋಟಕ 51 ರನ್ ಹಾಗೂ ಆರೋನ್ ಫಿಂಚ್ ಅವರ 29 ರನ್‍ಗಳ ನೆರವಿನಿಂದ ಆರ್.ಸಿ.ಬಿ. 160ರ ಗಡಿ ದಾಟಲು ಶಕ್ತವಾಗಿತ್ತು.
164 ರನ್‍ಗಳ ಗುರಿ ಬೆನ್ನತ್ತಿದ್ದ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಪರ ಜಾನಿ ಬೇರ್ಸ್ಟೋವ್ 61, ಮನೀಶ್ ಪಾಂಡೆ 34, ಪ್ರಿಯಮ್ ಗರ್ಗ್ 12 ರನ್ ಗಳಿಸುವ ಮೂಲಕ 19. 4 ಓವರ್ ಗಳಲ್ಲಿ 153 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡಿತು. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಮೂರು ವಿಕೆಟ್ ಕಬಳಿಸುವ ಮೂಲಕ ಬಹುತೇಕ ಪಂದ್ಯವನ್ನು ಹೈದರಾಬಾದ್ ಕೈಯಿಂದ ಕಿತ್ತುಕೊಂಡರೆ, ಸೈನಿ 2 ವಿಕೆಟ್ ಪಡೆಯುವ ಮೂಲಕ ಆರ್‍ಸಿಬಿ ಗೆಲುವಿಗೆ ನೆರವಾದರು. ಯಜುವೇಂದ್ರ ಚಹಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಹೈದ್ರಾಬಾದ್ ಪರವಾಗಿ ನಾಯಕ ಡೇವಿಡ್ ವಾರ್ನರ್ ಆರಂಭದಲ್ಲೇ 6 ರನ್ ಗಳಿಸಿ ಔಟದರೂ ಜಾನಿ ಬೈರ್‍ಸ್ಟೋವ್ ಮತ್ತು ಮನೀಷ್ ಪಾಂಡೆ ಎರಡನೇ ವಿಕೆಟಿಗೆ 71 ರನ್‍ಗಳ ಜೊತೆಯಾಟವಾಡಿದರು. 11.6 ಓವರ್‍ಗಳಲ್ಲಿ ತಂಡದ ಮೊತ್ತ 89 ಆಗಿದ್ದಾಗ 34 ರನ್ (33 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ಮನೀಷ್ ಪಾಂಡೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರೆ, ತಂಡದ ಮೊತ್ತ 121 ರನ್ ಆಗಿದ್ದಾಗ 61 ರನ್ (43 ಎಸೆತ, 6 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ಜಾನಿ ಬೈರ್‍ಸ್ಟೋವ್ ಕೂಡಾ ಪೆವಿಲಿಯನ್ ಸೇರಿಕೊಂಡರು.
ಯಜುವೇಂದ್ರ ಚಹಲ್ ಅವರು ಬೈರ್ ಸ್ಟೋವ್ ಅವರನ್ನು ಬೌಲ್ಡ್ ಮಾಡಿದ ಬೆನ್ನಲ್ಲೇ ವಿಜಯ್ ಶಂಕರ್ ಅವರನ್ನು ಶೂನ್ಯಕ್ಕೆ ಬೌಲ್ಡ್ ಮಾಡಿದರು. 89 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಹೈದರಾಬಾದ್ 121 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದೇ ವೇಳೆ ಪ್ರಿಯಂ ಗಾರ್ಗ್ ಕೂಡಾ ಬೌಲ್ಡ್ ಆದರು. ನಂತರ ಬಂದ ಅಭಿಷೇಕ್ ಶರ್ಮಾ ರನೌಟ್ ಆದರು. ನಂತರ ಸೈನಿ ರಶೀದ್ ಖಾನ್ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಬೌಲ್ಡ್ ಮಾಡಿದರು. ಈ ಮೂಲಕ ಪಂದ್ಯ ಬಹುತೇಕ ಆರ್‍ಸಿಬಿಯತ್ತ ವಾಲಿತು. ಚಹಲ್ 4 ಓವರ್ ಎಸೆತಗಾರಿಕೆ ನಡೆಸಿ 18 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರೆ, ದುಬೆ 3 ಓವರ್ ಎಸೆತಗಾರಿಕೆ ನಡೆಸಿ 15 ರನ್ ನೀಡಿ 2 ವಿಕೆಟ್ ತಮ್ಮದಾಗಿಸಿಕೊಂಡರು. ನವ್‍ದೀಪ್ ಸೈನಿ 2 ವಿಕೆಟ್, ಡೇಲ್ ಸ್ಟೇನ್ 1 ವಿಕೆಟ್ ಕಿತ್ತರು.
29 ಎಸೆತದಲ್ಲಿ 50 ರನ್ ಗಳಿಸಿದ ಎಬಿ ಡೆವಿಲಿಯರ್ಸ್
ದಕ್ಷಿಣ ಆಫ್ರಿಕಾ ತಂಡದ ಸ್ಫೋಟಕ ಬ್ಯಾಟ್ಸ್‍ಮನ್ ಎಬಿ ಡಿವಿಲಿಯರ್ಸ್ ಐಪಿಎಲ್ ಮೊದಲ ಪಂದ್ಯದಲ್ಲೂ ತಮ್ಮ ಸಾಮಥ್ರ್ಯ ಸಾಬೀತುಪಡಿಸಿದರು. ಕೇವಲ 29 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದರು. 30 ಎಸೆತದಲ್ಲಿ 51 ರನ್ ಹೊಡೆದ ಎಬಿಡಿ ಕೊನೆಯ ಓವರ್‍ನಲ್ಲಿ ರನೌಟ್‍ಗೆ ಬಲಿಯಾದರು. ಡಿವಿಲಿಯರ್ಸ್ ಇನ್ನಿಂಗ್ಸ್‍ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸ್ ಒಳಗೊಂಡಿತ್ತು.
ಎಬಿಡಿ ಮತ್ತು ಕರ್ನಾಟಕದ ರಣಜಿ ಆಟಗಾರ ದೇವದತ್ ಪಡಿಕ್ಕಲ್ ಅವರ ಸೊಗಸಾದ ಅರ್ಧಶತಕದಿಂದ ಆರ್‍ಸಿಬಿ ಹೈದರಾಬಾದ್ ತಂಡಕ್ಕೆ 164 ರನ್‍ಗಳ ಗುರಿಯನ್ನು ನೀಡಿದರು.
ಮೊದಲ ಐಪಿಎಲ್ ಪಂದ್ಯದಲ್ಲೇ ಮಿಂಚಿದ ದೇವದತ್ ಪಡಿಕ್ಕಲ್ ಅಪರೂಪದ ಸಾಧನೆ
ತಾನಾಡಿದ ಮೊದಲ ಐಪಿಎಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕರ್ನಾಟಕದ ರಣಜಿ ಆಟಗಾರ ದೇವದತ್ ಪಡಿಕಲ್ ಅಪರೂಪದ ಸಾಧನೆ ನಿರ್ಮಿಸಿದರು. 20 ವರ್ಷದ ಯುವ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಸಿಡಿಸಿದ್ದು, ಅಂತಿಮವಾಗಿ 56 ರನ್ (42 ಎಸೆತ, 8 ಬೌಂಡರಿ) ಭಾರಿಸಿ ಔಟಾದರು.
ಈ ಮೂಲಕ ಪಡಿಕ್ಕಲ್ ತಾನಾಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ-20, ಐಪಿಎಲ್ ಈ ಎಲ್ಲಾ ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಅಪರೂಪದ ಸಾಧನೆ ಮಾಡಿ ಸುದ್ದಿಯಾದರು. ಪಡಿಕ್ಕಲ್ 2019-20 ರ ವಿಜಯ್ ಹಜಾರೆ ಮತ್ತು ಸೈಯದ್ ಮುಸ್ತಾಕ್ ಆಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಹೊಡೆದಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ 11 ಇನ್ನಿಂಗ್ಸ್ ಆಡಿ 609 ರನ್ ಭಾರಿಸಿದ್ದಲ್ಲದೆ 81.09 ಸ್ಟ್ರೈಕ್ ರೇಟ್‍ನೊಂದಿಗೆ 2 ಶತಕ 5 ಅರ್ಧಶತಕ ಸಿಡಿಸಿದ್ದರು.
ಮುಸ್ತಾಕ್ ಆಲಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್‍ಗಳಿಂದ 580 ರನ್ ಭಾರಿಸಿದ್ದರು. 175.75 ಸ್ಟ್ರೈಕ್ ರೇಟ್‍ನಲ್ಲಿ 1 ಶತಕ, 5 ಅರ್ಧಶತಕ ಸಿಡಿಸಿದ್ದರು.
0 comments:
Post a Comment