ಬಂಟ್ವಾಳ (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬಲ್ಲಿ ಭಾನುವಾರ ಧಾರ್ಮಿಕ ಕ್ಷೇತ್ರದ ತಡೆಗೋಡೆ ತೆರವುಗೊಳಿಸುವ ಕಾರ್ಯವನ್ನು ಯುವಕರು ಸೇರಿ ಶ್ರಮದಾನದ ಮೂಲಕ ನಡೆಸುತ್ತಿದ್ದ ವೇಳೆ ಗೋಡೆ ಕುಸಿದು ಬಿದ್ದ ಪರಿಣಾಮ ನರಿಕೊಂಬು ಗ್ರಾಮದ ಶಂಭೂರು ನಿವಾಸಿ ಜನಾರ್ದನ (38) ಅವರು ಮೃತಪಟ್ಟಿದ್ದು, ಇನ್ನೋರ್ವ ಅಪ್ರಾಪ್ತ ಬಾಲಕ ವೃಷಭ (11) ಹಾಗೂ ಸೂರಜ್ (20) ಎಂಬವರು ಇತರ ಇಬ್ಬರು ಗಾಯಗೊಂಡಿದ್ದಾರೆ.
ಅಮ್ಮುಂಜೆ ಗ್ರಾಮದ ಮಾದುಕೋಡಿ ಎಂಬಲ್ಲಿನ ಧಾರ್ಮಿಕ ಕ್ಷೇತ್ರದ ಹಳೆ ಗೋಡೆಯನ್ನು ಕೆಡಹುವ ಕಾರ್ಯವನ್ನು ಯುವಕರು ಶ್ರಮದಾನದ ಮೂಲಕ ನಡೆಸುತ್ತಿದ್ದ ವೇಳೆ ಗೋಡೆಯ ಇಟ್ಟಿಗೆಗಳು ಹಠಾತ್ ಆಗಿ ಜನಾರ್ದನ ಅವರ ಮೇಲೆ ಕುಸಿದು ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸುವ ಕೆಲಸವನ್ನು ಮಾಡಿದರಾದರೂ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೆÇಲೀಸರು ಹಾಗೂ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment