ಹಾಸನ (ಕರಾವಳಿ ಟೈಮ್ಸ್) : ತಹಶೀಲ್ದಾರ್ ಕಾರಿನ ಚಕ್ರದ ಗಾಳಿ ತೆಗೆದುದನ್ನು ಆಕ್ಷೇಪಿಸಿದ ಪೊಲೀಸ್ ಕಾನ್ಸ್‍ಟೇಬಲ್ ಒಬ್ಬರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಇಲ್ಲಿನ ಗ್ರಾಮಾಂತರ ಠಾಣಾ ಕಾನ್ಸ್‍ಟೇಬಲ್ ದಯಾನಂದ್ ಅವರು ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಪೊಲೋ ಮೆಡಿಕಲ್ ಮುಂಭಾಗ ತನ್ನ ಕಾರು ನಿಲ್ಲಿಸಿ ಔಷಧಿ ತರಲು ತೆರಳಿದ್ದರು. ಈ ಸಂದರ್ಭ ಸ್ಥಳಕ್ಕೆ ಬಂದ ತಹಶೀಲ್ದಾರ್ ಮಂಜುನಾಥ್ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಗಮನಿಸಿದ್ದಾರೆ. ತಮ್ಮ ಕಾರು ಚಾಲಕನೊಂದಿಗೆ ವಾಹನದ ಚಕ್ರದ ತೆಗೆಯಲು ಆದೇಸಿದ್ದಾರೆ. ತಹಶೀಲ್ದಾರ್ ಸೂಚನೆಯಂತೆ ಚಾಲಕ ಕಾನ್ಸ್‍ಟೇಬಲ್ ವಾಹನದ ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದು ಬಿಟ್ಟಿದ್ದಾರೆ. ಮೆಡಿಕಲ್ ಶಾಪ್‍ನಿಂದ ಹೊರ ಬಂದ ಕಾನ್ಸ್‍ಟೇಬಲ್ ತಹಶೀಲ್ದಾರ್ ಕ್ರಮ ವಿರೋಧಿಸಿ ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ವಿನಿಮಯ ನಡೆಸಿಕೊಂಡಿದ್ದಾರೆ. ಬಳಿಕ ತಹಶೀಲ್ದಾರ್ ಅಲ್ಲಿಂದ ತೆರಳಿದ್ದಾರೆ.
ಆದರೆ ತಹಶೀಲ್ದಾರ್ ಕ್ರಮದಿಂದ ತೀವ್ರ ಆಕ್ರೋಶಗೊಂಡಿದ್ದ ಕಾನ್ಸ್‍ಟೇಬಲ್ ದಯಾನಂದ್ ಮಹಾತ್ಮ ಗಾಂಧೀಜಿ ಭಾವಚಿತ್ರ ಹಿಡಿದು ಕಾರಿನ ಮುಂಭಾಗ ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸಕಲೇಶಪುರದಲ್ಲಿ ಬಹಳ ಕಿರಿದಾದ ಜಾಗವಿದ್ದು ಕೇವಲ 2 ನಿಮಿಷದಲ್ಲಿ ಮೆಡಿಕಲ್‍ನಿಂದ ಔಷಧಿ ಖರೀದಿಸಿ ಹೊರ ಬರುವಷ್ಟರಲ್ಲಿ ಕಾರಿನ ನಾಲ್ಕು ಚಕ್ರದ ಗಾಳಿಯನ್ನು ತೆಗೆದಿದ್ದು ಸರಿಯಲ್ಲ. ತಹಶೀಲ್ದಾರ್ ಬೇಕಿದ್ದರೆ ದಂಡ ಹಾಕಲಿ ಅಥವಾ ನೋಟಿಸ್ ಜಾರಿ ಮಾಡಲಿ, ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಕಾನ್ಸ್‍ಟೇಬಲ್ ದಯಾನಂದ ಧರಣಿ ಕುಳಿತು ಪ್ರತಿಭಟಿಸಿದರು.
ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಬಳಿಕ ಹೆಚ್ಚುವರಿ ಪೊಲೀಸರೊಂದಿಗೆ ಸ್ಥಳಕ್ಕಾಗಮಿಸಿದ ನಗರ ಠಾಣಾ ಪಿಎಸ್ಸೈ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣಾ ಪಿಎಸ್ಸೈ ಚಂದ್ರಶೇಖರ್ ಅವರು ಕಾನ್ಸ್‍ಟೇಬಲ್ ದಯಾನಂದ್ ಅವರನ್ನು ಠಾಣೆಗೆ ಕರೆ ತಂದು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ತಾಸುಗಳ ಕಾಲ ನಡೆದ ಈ ವಿಲಕ್ಷಣ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
0 comments:
Post a Comment