ಬಂಟ್ವಾಳ (ಕರಾವಳಿ ಟೈಮ್ಸ್) : ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರಾಗಿದ್ದು, ಚುನಾವಣೆ ಸಂದರ್ಭ ಬಿಜೆಪಿ ಪಕ್ಷಕ್ಕಾಗಿ ಫೀಲ್ಡಿಗಿಳಿದವರೇ ಹೆಚ್ಚಾಗಿರುವ ಮೆಸ್ಕಾಂ ಮೀಟರ್ ರೀಡರ್ಸ್‍ಗಳು ತಾವು ಹಗಲು-ರಾತ್ರಿ ಕಷ್ಟಪಟ್ಟು ಆರಿಸಿ ಕಳುಹಿಸಿದ ಅದೇ ಪಕ್ಷದ ಶಾಸಕ-ಸಂಸದರನ್ನೊಳಗೊಂಡ ಸರಕಾರದ ಜನವಿರೋಧಿ, ಬಡವರ, ಕಾರ್ಮಿಕರ ವಿರೋಧಿ ನೀತಿಯಿಂದಾಗಿ ಇಂದು ಬೀದಿ ಪಾಲಾಗುವ ಪರಿಸ್ಥಿತಿ ಬಂದಿದೆ ಎಂದು ಬಂಟ್ವಾಳ ಮೆಸ್ಕಾಂ ಶಾಖಾ ವ್ಯಾಪ್ತಿಗೊಳಪಟ್ಟ ವಿದ್ಯುತ್ ಮಾಪಕ ಓದುಗರು ಸುದ್ದಿಗಾರರ ಮುಂದೆ ಒಕ್ಕೊರಳಿನಿಂದ ಅಲವತ್ತುಕೊಂಡರು.
ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರ ನೇತೃತ್ವದಲ್ಲಿ ಗುರುವಾರ ಬಿ ಸಿ ರೋಡಿನಲ್ಲಿ ಸುದ್ದಿಗೋಷ್ಠಿ ನಡೆಸಿ ಸಾವಿರಾರು ಸಂಖ್ಯೆಯ ಬಡ ವಿದ್ಯುತ್ ಮಾಪಕರ ಹಿತ ಕಡೆಗಣಿಸಿ ಯಾರೋ ಒಬ್ಬ ಗುತ್ತಿಗೆದಾರನ ಪಾದಕ್ಕೆ ಶರಣಾಗಿರುವ ಸರಕಾರದ ಕಾರ್ಮಿಕ ವಿರೋಧಿ, ಬಡವರ ವಿರೋಧಿ ಹಾಗೂ ಜನ ವಿರೋಧಿ ನೀತಿಯಿಂದಾಗಿ ವಿದ್ಯುತ್ ಮಾಪಕರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2008ರಲ್ಲಿ ಕಾಂಗ್ರೆಸ್ ಬೆಂಬಲಿತ ಗುತ್ತಿಗೆದಾರರಾಗಿದ್ದ ಲೆವಿನ್ ಇಲೆಕ್ಟ್ರಿಕಲ್ ಮಾಲಕರು ಕಡಿಮೆ ಮನೆಗಳ ಮಾಪಕ ಓದುತ್ತಿದ್ದ ಸಂದರ್ಭ ನೀಡಲಾಗುತ್ತಿದ್ದ ಕನಿಷ್ಠ ವೇತನಕ್ಕಿಂತ ಅತ್ಯಂತ ಕಡಿಮೆ ವೇತನ ಇಂದು 2020ರಲ್ಲಿ ಹೊಸ ಗುತ್ತಿಗೆದಾರರು ನೀಡುವುದಾಗಿ ತಿಳಿಸುತ್ತಿದ್ದು, ವ್ಯತ್ಯಾಸವನ್ನು ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಬೆಂಬಲಿತರು ಎಂಬ ಕಾರಣಕ್ಕೆ ಇಂದಿನ ಬಿಜೆಪಿ ನೇತೃತ್ವದ ಸರಕಾರ ಗುತ್ತಿಗೆದಾರರನ್ನು ಬದಲಾಯಿಸಿದ್ದು, ಬದಲಾದ ನೂತನ ಗುತ್ತಿಗೆದಾರರು ಮಾಪಕ ಓದುಗರ ಬದುಕಿನ ಜೊತೆಗೇ ಚೆಲ್ಲಾಟ ನಡೆಸುವ ಮೂಲಕ ಕಾರ್ಮಿಕ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಸರಕಾರವೂ ಗರಿಷ್ಠ ಸಂಖ್ಯೆಯಲ್ಲಿರುವ ವಿದ್ಯುತ್ ಮಾಪಕ ಓದುಗರನ್ನು ಕಡೆಗಣಿಸಿ ಒಬ್ಬ ಗುತ್ತಿಗೆದಾರನ ಪಾದಕ್ಕೆ ಶರಣಾಗುವ ಮೂಲಕ ಸರಕಾರವೂ ಬಡವರ, ಕಾರ್ಮಿಕರ ವಿರೋಧಿಯಾಗಿ ವರ್ತಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು ಹಾಗೂ ಸಚಿವರಲ್ಲಿ ಹೇಳಿಕೊಂಡರೆ ವಯಸ್ಸಾದವರು ಕೆಲಸ ಬಿಡಿ ಎಂದು ಬೇಜವಾಬ್ದಾರಿ ಹಾಗೂ ಉಡಾಫೆಯಿಂದ ಉತ್ತರಿಸುತ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮಾಪಕ ಓದುಗರು ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಬಿಜೆಪಿ ಸರಕಾರ ಕಡೆಗಣಿಸಿದರೆ, ಇತ್ತ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಪ್ರಶ್ನಿಸಬೇಕಾದ ಪ್ರತಿಪಕ್ಷಗಳೂ ಈ ಬಗ್ಗೆ ಮೌನ ವಹಿಸಿದ್ದು, ಒಟ್ಟಿನಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳೆಲ್ಲವೂ ಬಡ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಅಲವತ್ತುಕೊಂಡರು. ಮುಂದಿನ ದಿನಗಳಲ್ಲಿ ವಿರೋಧ ಪಕ್ಷಗಳಾದರೂ ಈ ಬಗ್ಗೆ ಎಚ್ಚೆತ್ತುಕೊಂಡು ಸರಕಾರದ ವಿರುದ್ದ ಸೆಟೆದು ನಿಲ್ಲುವ ಮೂಲಕ ಬಡ ಕಾರ್ಮಿಕರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಸರಕಾರದ ನೀತಿಯಿಂದಾಗಿ ಕಳೆದ 20 ವರ್ಷಗಳಿಂದ ಮೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಮಾಪಕ ಓದುಗರಾಗಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಬದುಕು ಡೋಲಾಯಮಾನವಾಗಿದ್ದು, ಈಗಾಗಲೇ 2 ತಿಂಗಳ ವೇತನವನ್ನು ಹಿಡಿದುಕೊಳ್ಳಲಾಗಿದೆ. ಅದನ್ನೂ ನೀಡದೆ ಮಾಪಕ ಓದುವ ಯಂತ್ರವನ್ನು ವಾಪಾಸು ನೀಡುವಂತೆ ಓದುಗರ ವಿರುದ್ದ ಮೆಸ್ಕಾಂ ಇಲಾಖೆ ಪೊಲೀಸ್ ದೂರು ನೀಡುವ ಮೂಲಕ ಬಡ ಕಾರ್ಮಿಕರ ಮೇಲೆ ಸವಾರಿ ಮಾಡಹೊರಟಿದೆ ಎಂದು ಹರಿಹಾಯ್ದರು.
ವಿದ್ಯುತ್ ಮಾಪಕ ಓದುಗರ ಬದುಕುವ ಹಕ್ಕಿನ ವಿರುದ್ದವಾಗಿರುವ ಈ ಎಲ್ಲಾ ಸಮಸ್ಯೆಗಳಿಗೆ ಸರಕಾರ, ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತವಾಗಿ ಶೀಘ್ರದಲ್ಲಿ ಸ್ಪಂದಿಸದಿದ್ದಲ್ಲಿ ಆಗಸ್ಟ್ 25 ರಂದು ಬಂಟ್ವಾಳ ಮೆಸ್ಕಾಂ ಇಲಾಖಾ ಕಛೇರಿಯ ಮುಂಭಾಗ ಧರಣಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಾಪಕ ಓದುಗರು ಎಚ್ಚರಿಸಿದರು.
0 comments:
Post a Comment