ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಸೆಪ್ಟಂಬರ್ 2017 ರ ಅವಧಿಯಲ್ಲಿ ಪೂರ್ಣಗೊಂಡು 1 ವರ್ಷದ ನಿರ್ವಹಣೆಯ ಬಳಿಕ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಬೇಕಾಗಿದ್ದು ಈವರೆಗೆ ಹಸ್ತಾಂತರವಾಗಿರುವುದಿಲ್ಲ.
ಈ ಬಗ್ಗೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅವರು ಮಂಗಳವಾರ ಜಕ್ರಿಬೆಟ್ಟು ರೇಚಕ ಸ್ಥಾವರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವಾರು ಸಮಸ್ಯೆಗಳು ಕಂಡು ಬಂದಿದ್ದು, ನಿರ್ವಹಣೆಗಳ ಬಗ್ಗೆ ಬಂಟ್ವಾಳ ಪುರಸಭೆ ಮತ್ತು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಂಗಳೂರು ಇವರುಗಳ ಮಧ್ಯೆ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಗೊಂದಲಗಳಿರುವುದನ್ನು ಕಂಡುಕೊಂಡಿದ್ದಾರೆ.
ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿಯವರ ಜೊತೆ ಮಾತುಕತೆ ನಡೆಸಿ ಶ್ರೀಘದಲ್ಲಿ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಇತ್ಯರ್ಥ ಪಡಿಸುವ ಬಗ್ಗೆ ನಿರ್ಧರಿಸಲಾಗಿದೆ.
ಈ ಸಂಧರ್ಭ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಸಹಾಯಕ ಕಾರ್ಯನಿರ್ವಾಹಣಾ ಅಧಿಕಾರಿ ಚಂದ್ರಶೇಖರ, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಬುಡಾ ಅಧ್ಯಕ್ಷ ಬಿ ದೇವದಾಸ ಶೆಟ್ಟಿ, ಸಹಾಯಕ ಅಭಿಯಂತರರಾದ ಶೋಭಾಲಕ್ಷ್ಮಿ, ಪುರಸಭಾ ಅಭಿಯಂತರ ಡೊಮೆನಿಕ್ ಡಿ’ಮೆಲ್ಲೊ, ಶಾಸಕರ ಆಪ್ತ ಸಹಾಯಕ ದಿನೇಶ್ ಹಾಗೂ ರೇಚಕ ಸ್ಥಾವರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
0 comments:
Post a Comment