ನವದೆಹಲಿ (ಕರಾವಳಿ ಟೈಮ್ಸ್) : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ನಡೆದ ಭೂಮಿ ಪೂಜೆ ಪಕ್ಷಪಾತದ, ರಾಜಕೀಯ ಉದ್ದೇಶಗಳಿಗೆ ಜನರ ಧಾರ್ಮಿಕ ಭಾವನೆಗಳ ಬೆತ್ತಲೆ ಶೋಷಣೆಯಾಗಿದ್ದು, ಇದು ಭಾರತೀಯ ಸಂವಿಧಾನದ ತತ್ವ, ಆಶಯ, ನಂಬಿಕೆ, ಉತ್ಸಾಹಗಳನ್ನು ಉಲ್ಲಂಘಿಸುತ್ತದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿರುವ ಅವರು, ಜನರ ಧಾರ್ಮಿಕ ಮನೋಭಾವನೆಗಳ ಬೆತ್ತಲೆ ಶೋಷಣೆ ನಿನ್ನೆ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮವಾಗಿತ್ತು. ಒಂದು ಪಕ್ಷ ತನ್ನ ರಾಜಕೀಯ ಉದ್ದೇಶಕ್ಕಾಗಿ ಮಾಡಿಕೊಂಡ ಅನುಕೂಲ ಸಿಂಧು ಕಾರ್ಯಕ್ರಮದಂತಿತ್ತು ಎಂದಿದ್ದಾರೆ.
ರಾಮ ಜನ್ಮಭೂಮಿ ನಿರ್ಮಾಣದ ಹೊಣೆಯನ್ನು ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಸಮ್ಮುಖದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿದ್ದು ಭಾರತೀಯ ಗಣತಂತ್ರ ಜಾತ್ಯಾತೀತ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ರೂಪವನ್ನೇ ನಿರಾಕರಿಸುವಂತಿದೆ.
ರಾಮಜನ್ಮಭೂಮಿ ಟ್ರಸ್ಟ್ ದೇವಾಲಯ ನಿರ್ಮಾಣ ಮಾಡಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ, ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದಂತೆ ಕಂಡುಬರುತ್ತಿದೆ ಎಂದು ಯೆಚೂರಿ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು. ಸುಪ್ರೀಂ ಕೋರ್ಟ್ ನ ನಿಯಮ ಪ್ರಕಾರ ಇದು ಕಾನೂನನ್ನು ಉಲ್ಲಂಘಿಸಿದಂತೆ. ಕಾನೂನು ಉಲ್ಲಂಘಿಸಿದವರನ್ನು ಶಿಕ್ಷಿಸಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಅಂತಹ ಶಿಕ್ಷೆ ಕೈಗೊಳ್ಳುವ ಮುನ್ನವೇ ಮಂದಿರ ನಿರ್ಮಾಣ ಆರಂಭಗೊಂಡಿದೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವಾಲಯ ಧಾರ್ಮಿಕ ಕಾರ್ಯಕ್ರಮಗಳಿಗೆ ಒಟ್ಟು ಸೇರುವುದನ್ನು ಕೋವಿಡ್-19 ಶಿಷ್ಟಾಚಾರದ ಪ್ರಕಾರ ನಿಷೇಧಿಸಿದೆ. ಆದರೆ ನಿನ್ನೆಯ ಅಯೋಧ್ಯೆ ಕಾರ್ಯಕ್ರಮವನ್ನು ಸರ್ಕಾರದ ಮಾಧ್ಯಮ ಡಿಡಿ ನ್ಯಾಷನಲ್ ನಲ್ಲಿ ಪ್ರಸಾರ ಮಾಡಲಾಗಿತ್ತು. ಇದು ಕಾನೂನು ಉಲ್ಲಂಘನೆಯಾಗಲಿಲ್ಲವೇ ಎಂದವರು ಪ್ರಶ್ನಿಸಿದ್ದಾರೆ.
0 comments:
Post a Comment