ವಿಟ್ಲ (ಕರಾವಳಿ ಟೈಮ್ಸ್) : ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಿ, ಖಾಸಗಿ ಆಸ್ಪತ್ರೆ ಗಳ ಲೂಟಿಕೋರ ನೀತಿಯನ್ನು ನಿಯಂತ್ರಿಸಿ, ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಿ ಇವೇ ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಡಿ ವೈ ಎಫ್ ಐ ವಿಟ್ಲ ವಲಯ ಸಮಿತಿ ವತಿಯಿಂದ ಶುಕ್ರವಾರ ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಡಿ ವೈ ಎಫ್ ಐ ಮಾಜಿ ರಾಜ್ಯಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಉತ್ತಮವಾದ ಆರೋಗ್ಯ ಸೇವೆ ನೀಡಬೇಕಾದ ಸರಕಾರಗಳು ಖಾಸಗಿ ಆಸ್ಪತ್ರೆಗಳ ಏಜೆಂಟರಾಗಿ ಕೆಲಸ ಮಾಡುತ್ತಿದೆ. ನಮ್ಮನ್ನಾಳುವ ಸರಕಾರಗಳು ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸುವ ಬದಲು ಖಾಸಗಿ ಆಸ್ಪತ್ರೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಲಾಕ್‍ಡೌನ್ ಹೆಸರಿನಲ್ಲಿ ಸರಕಾರ ಜನರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು ಎಲ್ಲಾ ಸಾರ್ವಜನಿಕ ಕ್ಷೇತ್ರವನ್ನು ಖಾಸಗಿಯವರಿಗೆ ಮಾರಟ ಮಾಡಲಾಗುತ್ತಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಲಾಕ್‍ಡೌನ್ ಹೇರುವ ಮೂಲಕ ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಡಿ ವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಡಿ ವೈ ಎಫ್ ಐ ಜನರ ಬದುಕಿನ ಪ್ರಶ್ನೆಯನ್ನು ಮುಂದಿಟ್ಟು ನಿರಂತರ ಹೋರಾಟ ನಡೆಸುತ್ತಿದ್ದು, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸರಕಾರ ಕಠಿಣ ಕಾನೂನುಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಮುಖಂಡ ರಾಮಣ್ಣ ವಿಟ್ಲ ಮಾತನಾಡಿ, ವಿಟ್ಲದಲ್ಲಿ ಡಿ ವೈ ಎಫ್ ಐ ಹೋರಾಟದ ಫಲವಾಗಿ ಇಂದು ಸಮುದಾಯ ಆರೋಗ್ಯ ಕೇಂದ್ರ ಹೊಸ ಕಟ್ಟಡದೊಂದಿಗೆ ರಚನೆಗೊಂಡಿದೆ. ಆದರೆ ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಕೂಡಲೇ ವಿಟ್ಲ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ತುಳಸೀದಾಸ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಡಿ ವೈ ಎಫ್ ಐ ವಿಟ್ಲ ವಲಯಾದ್ಯಕ್ಷ ನುಜುಮ್ ಅಳಿಕೆ, ಪ್ರಜಾ ಪರಿವರ್ತನಾ ವೇದಿಕೆಯ ಮುಖಂಡರಾದ ಕೃಷ್ಣಪ್ಪ ಪುದ್ದೊಟ್ಟು, ಬಿ ಟಿ ಕುಮಾರ್, ನ್ಯಾಯವಾದಿ ಮಹಮ್ಮದ್ ಗಝಾಲಿ, ಡಿ ವೈ ಎಫ್ ಐ ವಿಟ್ಲ ವಲಯ ಕಾರ್ಯದರ್ಶಿ ಜಮೀಲ್, ಪ್ರಮುಖರಾದ ಶಹೀದ್ ಶೈನ್, ಆರೀಫ್ ಬಿ ಕೆ, ಇಬ್ರಾಹಿಂ ಭಾಷಿಂ, ಸಲೀಂ ಮಲಿಕ್, ಸಪ್ವಾನ್, ಆಲಿ ಮದಕ, ಸಾದಿಕ್, ಸಮೀರ್ ಪಾತ್ರತೋಟ, ಜಬ್ಬಾರ್ ಆನೆಕಲ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ತ್ತಾಯಿಸಿ ವಿಟ್ಲ ಅರೋಗ್ಯಾಧಿಕಾರಿಗಳ ಮುಖಾಂತರ ಇದೇ ವೇಳೆ ಮನವಿ ಸಲ್ಲಿಸಲಾಯಿತು.
0 comments:
Post a Comment