ಮಂಗಳೂರು (ಕರಾವಳಿ ಟೈಮ್ಸ್) : ನಗರದ ಡಿ.ಜೆ. ಹಳ್ಳಿ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಡೆಗೆ ಮಾಜಿ ಸಚಿವ, ಮಂಗಳೂರು ಶಾಸಕ ಯು ಟಿ ಖಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಕಾರದ ವೈಫಲ್ಯವೇ ಎಲ್ಲಾ ಘಟನೆಗಳಿಗೂ ಕಾರಣ ಎಂದು ಯು ಟಿ ಖಾದರ್ ಸರಣಿ ಟ್ವೀಟ್‍ಗಳ ಮೂಲಕ ಝಾಡಿಸಿದ್ದಾರೆ.
ಪ್ರಥಮ ಟ್ವೀಟಿನಲ್ಲಿ “ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ತಡೆಯಲಾಗಲಿಲ್ಲ. ಆರೋಪಗಳನ್ನೂ ಪತ್ತೆ ಹಚ್ಚಲಾಗಲಿಲ್ಲ. ಪ್ರವಾದಿಗೆ ನಿಂದಿಸಿದ ವ್ಯಕ್ತಿ ಪಕ್ಕದಲ್ಲೇ ಇದ್ದರು ಬಂದಿಸಲಿಲ್ಲ” ಎಂದು ಬರೆದುಕೊಂಡಿರುವ ಶಾಸಕ ಖಾದರ್ ಇನ್ನೊಂದು ಟ್ವೀಟ್‍ನಲ್ಲಿ “ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬೀಳೋ ತನಕ, ಪೊಲಿಸ್ ಠಾಣೆ ಸುಟ್ಟು ಬೂದಿಯಾಗೋ ತನಕ, ಪೊಲಿಸರು ಏನೂ ಮಾಡಿಲ್ಲ, ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಯಾದ ಪ್ರಕರಣದ ಕಥೆ ಏನಾಯ್ತು ಗೊತ್ತಿಲ್ಲ, ಮಂಗಳೂರು ಗಲಭೆಗೆ ಕೇರಳದಿಂದ ಬಂದವರು ಕಾರಣ ಎಂದಿರಿ, ಹಾಗಿದ್ದರೆ ಒಬ್ಬ ಕೇರಳಿಗರನ್ನ ಏಕೆ ಬಂದಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಯು ಟಿ ಖಾದರ್, “ಸರಕಾರದ ಭಯ ಇದ್ರೆ ಪುಂಡರು ಈ ರೀತಿ ವರ್ತಿಸುತ್ತಿರಲಿಲ್ಲ. ಇದು ಸರ್ಕಾರದ ವೈಫಲ್ಯವಲ್ಲದೆ ಮತ್ತೇನು? ನೈಜ ಆರೋಪಿಯ ಪತ್ತೆ ಹಚ್ಚುವ ಬದಲು ಸರ್ಕಾರ ಅಮಾಯಕರನ್ನ ಬಂಧಿಸುತ್ತಿದೆ. ಈ ಮೂಲಕ ನೈಜ ಅಪರಾಧಿಗಳಿಗೆ ರಕ್ಷಣೆ ನೀಡ್ತಾ ಇದೆ” ಎಂದು ಬರೆದುಕೊಂಡಿದ್ದಾರೆ.
“ರಾಜಕೀಯದ ಕೆಸರೆರಚಾಟ ಮಾಡುವ ಬದಲು ಸಮಾಜಘಾತುಕ ಶಕ್ತಿ ಯಾರೇ ಇರಲಿ ಅವರನ್ನ ಮಟ್ಟ ಹಾಕಿ ನಿಮ್ಮ ಬದ್ದತೆಯನ್ನ ತೋರಿಸಿ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ ಅಧಿಕಾರದಲ್ಲಿ ಕುಳಿತು ಇನ್ನೊಬ್ಬರ ಮೇಲೆ ಬೆರಳು ತೋರಿಸುವುದೇ ನಿಮ್ಮ ಸ್ವರ್ಣಯುಗವೇ? ಬಂಧಿಸಿದ ನಿರಪರಾಧಿಗಳಿಗೆ ಮುಕ್ತಿ ನೀಡಿ, ನೈಜ ಅಪರಾಧಿಯನ್ನ ಶಿಕ್ಷಿಸಿ, ಸಮಾಜವನ್ನ ರಕ್ಷಿಸಿ.” ಎಂದು ಬರೆದುಕೊಳ್ಳುವ ಮೂಲಕ ಶಾಸಕ ಯು ಟಿ ಖಾದರ್ ಮತ್ತೊಂದು ಟ್ವೀಟ್ ಮಾಡುವ ಮೂಲಕ ಸರಕಾರದ ಕ್ರಮದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
0 comments:
Post a Comment