ನವದೆಹಲಿ (ಕರಾವಳಿ ಟೈಮ್ಸ್) : ಸಾಲದ ಕಂತು ಮರುಪಾವತಿ ಮುಂದೂಡಿರುವ ಅವಧಿಗೂ ಗ್ರಾಹಕರು ಬಡ್ಡಿ ಪಾವತಿಸಬೇಕು ಎಂಬ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಲುವಿಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆರು ತಿಂಗಳ ಕಾಲ ಸಾಲ ಮರುಪಾವತಿ ಮುಂದೂಡುವ ಅವಧಿಯಲ್ಲಿ ಬಡ್ಡಿ ವಿಧಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲು ಸೂಚಿಸಿದೆ. ಬಡ್ಡಿಯ ಮೇಲೆ ಬಡ್ಡಿ ವಿಧಿಸುತ್ತಿರಾ ಎಂದು ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಮತ್ತೊಮ್ಮೆ ಕೇಂದ್ರ ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಆರ್.ಬಿ.ಐ ಹೆಸರು ಹೇಳಿಕೊಂಡು ಎಷ್ಟು ಕಾಲ ನೀವು (ಕೇಂದ್ರ ಸರ್ಕಾರ) ಅವಿತುಕೊಳ್ಳಲು ಸಾಧ್ಯ ಎಂದು ಸುಪ್ರೀಂ ಪ್ರಶ್ನಿಸಿದೆ.
ಸರಕಾರ ಘೋಷಿಸಿರುವ ಹಣಕಾಸು ಉತ್ತೇಜನ ಕ್ರಮಗಳಿಂದ ಎಷ್ಟು ಜನರು ಪ್ರಯೋಜನ ಹೊಂದಿದ್ದಾರೆ. ಅದು ನಿಜವಾಗಿಯೂ ಅವರಿಗೆ ತಲುಪಿದೆಯೇ? ಎಂದು ಕೋರ್ಟ್ ಪ್ರಶ್ನಿಸಿದೆ. ವ್ಯವಹಾರದ ಉದ್ದೇಶಗಳನ್ನು ಬದಿಗಿಟ್ಟು ಜನರ ಸಂಕಷ್ಟಗಳನ್ನು ಪರಿಹರಿಸಬೇಕೆಂದು ಸೂಚಿಸಿದೆ. ಈ ಸಂಬಂಧ ಪೂರ್ಣ ವರದಿಯನ್ನು ಸೆಪ್ಟೆಂಬರ್ 1 ರೊಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಉದ್ಯಮಗಳಿಗೆ ಸಂಬಂಧಿಸಿದ ಕಳವಳಗಳನ್ನು ಆರ್‌ಬಿಐ ನಿಭಾಯಿಸುತ್ತಿದೆ. ಆದರೆ ಸರ್ಕಾರ ಆರ್‌ಬಿಐ ಹಿಂದೆ ಅವಿತುಕೊಳ್ಳುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬಡ್ಡಿ ಮನ್ನಾ, ಬಡ್ಡಿ ಮೇಲೆ ಬಡ್ಡಿಯ ಮನ್ನಾ ಆಂಶಗಳ ಬಗ್ಗೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಬಡ್ಡಿ ಮನ್ನಾ ಕೋರಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ ಆದೇಶಿಸಿದ ನಂತರ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದೆ.
0 comments:
Post a Comment